ನಗರಾಸ್ತಿ ಮಾಲಕತ್ವದ ಹಕ್ಕು ದಾಖಲೆಗಳ ಅನುಷ್ಠಾನ: ಆರ್.ವಿ.ದೇಶಪಾಂಡೆ

Update: 2018-12-19 17:22 GMT

ಬೆಳಗಾವಿ, ಡಿ.19: ನಗರ ಪ್ರದೇಶದ ಪ್ರತಿಯೊಂದು ಆಸ್ತಿಯನ್ನು ಅಳತೆ ಮಾಡಿ ಮಾಲಕತ್ವದ ಹಕ್ಕುದಾಖಲೆಗಳಾದ ಪ್ರಾಪರ್ಟಿ ರೆಜಿಸ್ಟ್ರೇಷನ್ ಕಾರ್ಡ್‍ಗಳನ್ನು ಸಿದ್ಧಪಡಿಸುವಂತಹ ನಗರಾಸ್ತಿ ಮಾಲಕತ್ವದ ಹಕ್ಕುದಾಖಲೆಗಳ ಯೋಜನೆಯಡಿಯಲ್ಲಿ ಪ್ರಸ್ತುತ ರಾಜ್ಯದ ಮೈಸೂರು, ಶಿವಮೊಗ್ಗ ಮತ್ತು ಮಂಗಳೂರು ನಗರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಬುಧವಾರ ಪ್ರಶ್ನೋತ್ತರ ಕಲಾಪ ವೇಳೆಯಲ್ಲಿ ಶಾಸಕ ರಿಝ್ವಾನ್ ಹರ್ಷದ್ ಅವರ ಪರವಾಗಿ ಶರಣಪ್ಪ ಮಟ್ಟೂರ ಅವರು ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ವಿ. ದೇಶಪಾಂಡೆ ಅವರು, ಈಗಾಗಲೇ ಪ್ರಥಮ ಹಂತದಲ್ಲಿ ಬೆಂಗಳೂರು ನಗರದ 60 ವಾರ್ಡ್‍ಗಳಲ್ಲಿ ಸರ್ವೆ ಆಫ್ ಇಂಡಿಯಾದವರ ಸಹಯೋಗದಲ್ಲಿ ಡ್ರೋನ್/ಯುಎವಿ ಆಧಾರಿತ ಸರ್ವೆ ಕಾರ್ಯಕ್ಕಾಗಿ ಇಲಾಖೆಯಿಂದ ತಂಡಗಳನ್ನು ರಚಿಸಿ ಫ್ಲೈಯಿಂಗ್ ಪ್ರಾರಂಭಿಸಲಾಗಿರುತ್ತದೆ ಎಂದು ಹೇಳಿದರು.

ಸರ್ವೆ ಆಫ್ ಇಂಡಿಯಾದವರು ಡಾಟಾ ಪ್ರೊಸೆಸಿಂಗ್ ಮಾಡಿ ಇಲಾಖೆಗೆ ಒದಗಿಸಿದ ತಕ್ಷಣ ಇಲಾಖಾ ಸಿಬ್ಬಂದಿಯ ಮೂಲಕ ಪರಿಶೀಲನಾ ಕಾರ್ಯ ಮತ್ತು ಆಸ್ತಿ ದಾಖಲೆಗಳ ಸೃಜನಾ ಕಾರ್ಯವನ್ನು ಕೈಗೊಳ್ಳಲಾಗುವುದು. ಇದೇ ರೀತಿ ಇನ್ನುಳಿದ ವಾರ್ಡ್‍ಗಳಲ್ಲಿಯೂ ಸಹ ಹಂತ ಹಂತವಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿರುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News