ಕಸ್ತೂರಿ ರಂಗನ್ ವರದಿ ಸಂಪುಟ ಉಪಸಮಿತಿಯಿಂದ ತಿರಸ್ಕಾರ: ಸಚಿವ ಆರ್.ಶಂಕರ್

Update: 2018-12-19 17:25 GMT

ಬೆಳಗಾವಿ, ಡಿ.19: ಪಶ್ಚಿಮ ಘಟ್ಟಗಳ ರಕ್ಷಣೆಗೆ ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಸ್ಥಳೀಯರು ವಿರೋಧಿಸುತ್ತಿದ್ದಾರೆ. ವರದಿ ಅನುಷ್ಠಾನದಿಂದ ಕೈಗಾರಿಕೆ ಮತ್ತು ಇತರ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವುದರಿಂದ ಈಗಾಗಲೇ ಸಚಿವ ಸಂಪುಟ ಉಪಸಮಿತಿಯು ಈ ವರದಿಯ ಶಿಫಾರಸ್ಸುಗಳನ್ನು ತಿರಸ್ಕರಿಸಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಸರಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಅರಣ್ಯ ಸಚಿವ ಆರ್. ಶಂಕರ್ ತಿಳಿಸಿದ್ದಾರೆ.

ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ವಿಧಾನ ಪರಿಷತ್ ನಲ್ಲಿ ಐವನ್ ಡಿ’ಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಸ್ತೂರಿ ರಂಗನ್ ಸಮಿತಿಯ ವರದಿಗಳ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರಕಾರವು 2018ರ ಅ.3ರಂದು ನಾಲ್ಕನೇ ಕರಡು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು 2019ರ ಜ.3ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.

ಕರಡು ಅಧಿಸೂಚನೆಯ ಪ್ರದೇಶಗಳಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಿಲ್ಲ. ಹೀಗಾಗಿ, ಜನರು ನಿರಾಶ್ರಿತರಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಕೆಲವು ನಿಯಮಗಳ ಕಾರಣದಿಂದಾಗಿ ಕೈಗಾರಿಕೆಗಳು, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಜಲವಿದ್ಯುತ್ ಮತ್ತಿತರ ಅಭಿವೃದ್ಧಿ ಕಾಮಗಾರಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಕೇಂದ್ರವು ಪದೇ ಪದೇ ಅಧಿಸೂಚನೆಯನ್ನು ಕಳಿಸುತ್ತಿದೆ. ರಾಜ್ಯ ಇದನ್ನು ಒಪ್ಪುವುದಿಲ್ಲ ಎಂದು ಸಚಿವರು ವಿವರಿಸಿದರು.

ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡಿ, ಈಗಾಗಲೇ ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಕೇರಳ ರಾಜ್ಯ ತಿರಸ್ಕರಿಸಿದೆ. ರಾಜ್ಯ ಸರಕಾರವೂ ಇದನ್ನು ತಿರಸ್ಕರಿಸಬೇಕು. 1930ರ ದಶಕದಲ್ಲಿ ನಿರ್ಮಾಣವಾಗಿರುವ ಕೊಡಗು ಮತ್ತು ಕೇರಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಶಿಥಿಲವಾಗಿದೆ. ಅದನ್ನು ಪುನರ್ ನಿರ್ಮಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News