ಬಾಪೂಜಿ ಸೇವಾ ಕೇಂದ್ರದ ಮೂಲಕ 95 ಲಕ್ಷ ಸೇವೆ: ಸಚಿವ ಕೃಷ್ಣ ಭೈರೇಗೌಡ

Update: 2018-12-19 17:29 GMT

ಬೆಳಗಾವಿ, ಡಿ.19: ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಈವರೆಗೆ ರಾಜ್ಯದ ಗ್ರಾಮೀಣ ಭಾಗದ ಜನತೆಗೆ ಸುಮಾರು 90 ರಿಂದ 95 ಲಕ್ಷ ಸೇವೆಗಳನ್ನು ಒದಗಿಸಲಾಗಿದೆ. ಈ ಕೇಂದ್ರಗಳ ಕಾರ್ಯನಿರ್ವಹಣೆಗೆ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಯೋಜನೆಗೆ ಹಿನ್ನೆಡೆ ಉಂಟಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ಬಿ.ಜಿ ಪಾಟೀಲ, ಎಂ.ಕೆ ಪ್ರಾಣೇಶ್, ಸುನೀಲ ಸುಬ್ರಮಣಿ ನಿಯಮ 72ರ ಅಡಿಯಲ್ಲಿ ಮಂಡಿಸಿದ್ದ ಗಮನ ಸೆಳೆಯುವ ಸೂಚನೆಗೆ ಅವರು ಉತ್ತರಿಸಿದರು.

ಗ್ರಾಮೀಣ ಜನತೆಯು ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಇಲಾಖೆಗಳಿಂದ ದಾಖಲೆಗಳನ್ನು ತ್ವರಿತವಾಗಿ ಪಡೆದುಕೊಳ್ಳುವ ಸಲುವಾಗಿ ಗ್ರಾಮ ಪಂಚಾಯತ್ ಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಲಭ್ಯವಿರುವ ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನು ಉಪಯೋಗಿಸಿಕೊಂಡು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಪ್ರಸ್ತುತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 25 ಹಾಗೂ ಕಂದಾಯ ಇಲಾಖೆಯ 40 ಸೇವೆಗಳು ಸೇರಿ ಒಟ್ಟು 65 ಸೇವೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಕಂದಾಯ ಇಲಾಖೆ ಪಹಣಿ ಪತ್ರ ವಿತರಣೆಯಿಂದ 37,57,002 ಸೇವೆಗಳು, 1,11,668 ಫಲಾನುಭವಿಗಳಿಗೆ ನಾಡಕಚೇರಿ ಸೇವೆಗಳು, ಅನಿಲಭಾಗ್ಯ ಯೋಜನೆ ಸೌಲಭ್ಯವನ್ನು 3,25,209 ಫಲಾನುಭವಿಗಳಿಗೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ 49,22,780 ಸೇವೆಗಳನ್ನು ಈ ಕೇಂದ್ರಗಳ ಮೂಲಕ ಒದಗಿಸಲಾಗಿದೆ. ಈ ಸೇವೆಗಳಿಂದಾಗಿ ಗ್ರಾಮ ಪಂಚಾಯತ್ ಗಳಿಗೆ ಭಾಗಶಃ ಆದಾಯವೂ ಕೂಡಾ ದೊರೆಯುತ್ತಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News