ರಫೇಲ್ ಒಂದು 'ಗೇಮ್ ಚೇಂಜರ್' ಎಂದ ವಾಯು ಸೇನಾ ಮುಖ್ಯಸ್ಥ

Update: 2018-12-20 08:15 GMT

ಜೋಧ್ ಪುರ್, ಡಿ.20: ರಫೇಲ್ ಒಂದು ಗೇಮ್ ಚೇಂಜರ್ ಆಗಿದೆ ಎಂದು ಹೇಳಿರುವ ಏರ್ ಚೀಫ್ ಮಾರ್ಷಲ್ ಬಿ ಎಸ್ ಧನೋವ, ಸುಪ್ರೀಂ ಕೋರ್ಟ್ ‘‘ಒಂದು ಉತ್ತಮ ತೀರ್ಪು’’ ನೀಡಿದೆ ಎಂದಿದ್ದಾರೆ.

ರಕ್ಷಣಾ ಇಲಾಖೆಗೆ ಸಂಬಂಧಿಸಿದ ಖರೀದಿಗಳ ವಿಚಾರವನ್ನು ರಾಜಕೀಕರಣಗೊಳಿಸುವುದರ ವಿರುದ್ಧ ಎಚ್ಚರಿಕೆ ನೀಡಿದ ಅವರು, ಇಂತಹ ಬೆಳವಣಿಗೆಯಿಂದಾಗಿಯೇ ಈ ಹಿಂದೆ ಬೋಫೋರ್ಸ್ ಗನ್ ಖರೀದಿಯಲ್ಲೂ ವಿಳಂಬವಾಗಿತ್ತೆಂದು ನೆನಪಿಸಿದರು.

‘‘ನಾನು ತೀರ್ಪಿನ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ, ಆದರೆ ಸುಪ್ರೀಂ ಕೋರ್ಟ್ ಉತ್ತಮ ತೀರ್ಪು ನೀಡಿದೆ ಹಾಗೂ ಈ ಯುದ್ಧ ವಿಮಾನ ಬಹಳಷ್ಟು ಅಗತ್ಯವಾಗಿದೆ’’ ಎಂದು ಜೋಧ್ ಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ವಾಯು ಸೇನೆ ಮುಖ್ಯಸ್ಥರು ಹೇಳಿದರು.

‘‘ತಂತ್ರಜ್ಞಾನದ ವಿಚಾರದ ಬಗ್ಗೆ ಹೇಳುವುದಾದರೆ ರಫೇಲ್ ಯುದ್ಧ ವಿಮಾನದ ಬಗ್ಗೆ ಯಾವುದೇ ಪ್ರಶ್ನೆ ಬೇಡ. ಈ ಯುದ್ಧ ವಿಮಾನದಲ್ಲಿ ಅತ್ಯುತ್ತಮ ಸೌಲಭ್ಯಗಳು ಮತ್ತು ವ್ಯವಸ್ಥೆಗಳಿರುವಂತೆ ವಾಯು ಸೇನೆ ನೋಡಿಕೊಂಡಿದೆ. ಈ ವಿಮಾನ ಖರೀದಿ ಪ್ರಕ್ರಿಯೆ ಈಗಾಗಲೇ ಬಹಳಷ್ಟು ಸಮಯ ತೆಗೆದುಕೊಂಡಿದೆ ಹಾಗೂ ಈ ಅವಧಿಯಲ್ಲಿ ಭಾರತದ ನೆರೆಯ ರಾಷ್ಟ್ರಗಳು ತಮ್ಮ ರಕ್ಷಣಾ ಶಸ್ತ್ರಾಸ್ತ್ರಗಳನ್ನು ಉನ್ನತೀಕರಿಸಿವೆ’’ ಎಂದು ಅವರು ಹೇಳಿದರು.

‘‘ತಮ್ಮ ಹಣ ಯಾವ ಉದ್ದೇಶಕ್ಕೆ ಖರ್ಚಾಗುತ್ತಿದೆ ಎಂದು ತಿಳಿಯುವ ಹಕ್ಕು ತೆರಿಗೆದಾರರಿಗಿದೆ. ಅವರ ಹಣ ಸರಿಯಾಗಿಯೇ ಖರ್ಚಾಗುವಂತೆ ನೋಡಿಕೊಳ್ಳಲು ಸಿಎಜಿ ಇದೆ. ವಾಯುಸೇನೆಯ ಬಳಿ ಯುದ್ಧ ವಿಮಾನಗಳ ಕೊರತೆಯ ಬಗ್ಗೆ ಉಲ್ಲೇಖಿಸಿದ ಅವರು, ವಾಯುಸೇನೆ ತನ್ನ ಸಂಪನ್ಮೂಲಗಳನ್ನು ಗರಿಷ್ಠಗೊಳಿಸಲು ಯತ್ನಿಸುತ್ತಿದೆ’’ ಎಂದರು.

ತಮ್ಮ ಮಾತುಗಳ ಮೂಲಕ ವಾಯು ಸೇನೆ ಮುಖ್ಯಸ್ಥರು ಕೇಂದ್ರ ಸರಕಾರದ ವಾದವನ್ನೇ ಪುಷ್ಠೀಕರಿಸುವಂತಿದೆ.
ಅವರು ಜೋಧ್ ಪುರದಲ್ಲಿ ಭಾರತೀಯು ವಾಯು ಸೇನೆ ಹಾಗೂ ರಷ್ಯನ್ ಫೆಡರೇಶನ್ ಏರೋಸ್ಪೇಸ್ ಫೋರ್ಸ್ ಜಂಟಿಯಾಗಿ ನಡೆಸುತ್ತಿರುವ ಏವಿಯಾಇಂದ್ರ 2018 ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News