ಅಕ್ರಮ ಬಂಗಲೆಗಳನ್ನು ಕೆಡವಲು ಯಂತ್ರಗಳ ಖರೀದಿಗೆ ಹಣವಿಲ್ಲ: ಹೈಕೋರ್ಟ್‌ನಲ್ಲಿ ಅಳಲು ತೋಡಿಕೊಂಡ ರಾಯಗಡ ಜಿಲ್ಲಾಧಿಕಾರಿ

Update: 2018-12-20 13:46 GMT
bombay high court,

ಮುಂಬೈ,ಡಿ.20: ಅಲಿಬಾಗ್ ಬೀಚ್‌ನಲ್ಲಿಯ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ನಡೆಸಲು ತನ್ನ ಬಳಿ ಹಣವಿಲ್ಲ ಎಂದು ರಾಯಗಡ ಜಿಲ್ಲಾಧಿಕಾರಿಗಳ ಕಚೇರಿಯು ಗುರುವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದೆ. ಇಂತಹ ಎಲ್ಲ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಉಚ್ಚ ನ್ಯಾಯಾಲಯವು ಈ ಹಿಂದೆ ಜಿಲ್ಲಾಡಳಿತಕ್ಕೆ ನಿರ್ದೇಶ ನೀಡಿತ್ತು.

 ಹಲವಾರು ಶ್ರೀಮಂತ ವ್ಯಕ್ತಿಗಳು ಸರಕಾರದ ಮತ್ತು ಕರಾವಳಿ ವಲಯ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿ ಅಲಿಬಾಗ್ ಬೀಚ್‌ನಲ್ಲಿ ಬಂಗಲೆಗಳು ಮತ್ತು ಖಾಸಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯು 2009ರಿಂದ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲು ಯಂತ್ರಗಳನ್ನು ಖರೀದಿಸಲು ಅಥವಾ ಬಾಡಿಗೆಗೆ ಪಡೆದುಕೊಳ್ಳಲು ಹಣವಿಲ್ಲ ಎಂದು ಜಿಲ್ಲಾಡಳಿತವು ಈಗಾಗಲೇ ರಾಜ್ಯ ಸರಕಾರಕ್ಕೆ ಪತ್ರವೊಂದನ್ನು ಬರೆದಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳ ಕಚೇರಿಯ ಪರ ವಕೀಲ ಪಿ.ಬಿ.ಕಾಕಡೆ ಅವರು, ಈ ಉದ್ದೇಶಕ್ಕಾಗಿ ಹಣವನ್ನು ಹಂಚಿಕೆ ಮಾಡುವಂತೆ ಸರಕಾರಕ್ಕೆ ನಿರ್ದೇಶಿಸುವಂತೆ ಜಿಲ್ಲಾಧಿಕಾರಿಗಳು ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ ಎಂದು ಹೇಳಿದರು.

ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಾಲಯವು,ಜಿಲ್ಲಾಧಿಕಾರಿಗಳೂ ಸರಕಾರದ ಭಾಗವಲ್ಲವೇ? ಹೀಗಿರುವಾಗ ಹಣವನ್ನು ಕೋರಿ ಅವರು ತನಗೇ ಹೇಗೆ ಪತ್ರ ಬರೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿತು.

ಈ ವಿಷಯದಲ್ಲಿ ಗಮನ ಹರಿಸುವಂತೆ ನ್ಯಾಯಾಲಯವು ರಾಜ್ಯ ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳಿಗೆ ನಿರ್ದೇಶ ನೀಡಿತು.

ಅಲಿಬಾಗ್‌ನಲ್ಲಿರುವ ಬ್ಯಾಂಕ್ ವಂಚನೆಯ ಆರೋಪಿ ನೀರವ್ ಮೋದಿಗೆ ಸೇರಿದ ಬಂಗಲೆಯನ್ನು ನೆಲಸಮಗೊಳಿಸುವಂತೆ ತಾನು ಆದೇಶಿಸಿರುವುದಾಗಿ ಮಹಾರಾಷ್ಟ್ರ ಸರಕಾರವು ಇತ್ತೀಚಿಗೆ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅಫಿದಾವತ್ತಿನಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News