ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ವಿಧಾನ ಪರಿಷತ್ ಕಲಾಪ ಬಲಿ

Update: 2018-12-20 16:11 GMT

ಬೆಳಗಾವಿ, ಡಿ.20: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕೆಂದು ವಿಧಾನ ಪರಿಷತ್ ಸದಸ್ಯರು ಪಟ್ಟು ಹಿಡಿದ ಬೆನ್ನಲ್ಲೇ ಸಭಾಪತಿಗಳು ನಾಲ್ಕೈದು ಬಾರಿ ಕಲಾಪವನ್ನು ಮುಂದೂಡಿದ ಘಟನೆ ನಡೆಯಿತು.

ಸದನ ಪ್ರಾರಂಭವಾಗುತ್ತಿದ್ದಂತೆಯೇ ಬಿಜೆಪಿಯ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಅವರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಿಲುವಳಿ ಸೂಚನೆ ಅಡಿಯಲ್ಲಿ ಅವಕಾಶ ನೀಡಬೇಕೆಂದು ಸಭಾಪತಿಗಳಲ್ಲಿ ಮನವಿ ಮಾಡಿದರು. ಈ ಮನವಿಗೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಅಧಿವೇಶನ ಪ್ರಾರಂಭವಾಗಿ ಇಂದಿಗೆ ಎಂಟನೆ ದಿನವಾಗಿದ್ದು, ಏಳು ದಿನಗಳ ಕಾಲ ನೀವೇಕೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿಲ್ಲ. ಹಾಗೂ ನಿಲುವಳಿ ಸೂಚಿಸಲಿಲ್ಲ ಎಂದು ಪ್ರಶ್ನಿಸಿದರು.

ಅಧಿವೇಶನ ಪ್ರಾರಂಭವಾದ ದಿನದಿಂದಲೂ ಉತ್ತರ ಕರ್ನಾಟಕದ ಸಮಸ್ಯೆಗಳು ಹಾಗೂ ರೈತರ ಸಾಲಮನ್ನಾ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಪತಿಗಳಲ್ಲಿ ಮನವಿ ಮಾಡಿದ್ದೇವೆ. ಆದರೂ ಚರ್ಚೆಗೆ ಅವಕಾಶ ನೀಡಿಲ್ಲ. ಆಡಳಿತ ಪಕ್ಷಕ್ಕೂ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಯಾವುದೇ ಆಸಕ್ತಿ ಆಗಲಿ, ಕಾಳಜಿ ಆಗಲಿ ಇಲ್ಲ ಎಂದು ಬಿಜೆಪಿ ಸದಸ್ಯರು ಆಡಳಿತ ಪಕ್ಷದ ಸದಸ್ಯರ ವಿರುದ್ಧ ಹರಿಹಾಯ್ದರು. ಅಲ್ಲದೆ, ಸದನದ ಬಾವಿಗೆ ಇಳಿದ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಪರಿಷತ್ ಸದಸ್ಯ ಮರಿತಿಬ್ಬೆಗೌಡ ಮಾತನಾಡಿ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಬಿಜೆಪಿ ಸದಸ್ಯರು ಧ್ವನಿ ಎತ್ತುತ್ತಿಲ್ಲ ಎಂದು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ಬಿಜೆಪಿ ಸದಸ್ಯರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಿ ಎಂದು ಪಟ್ಟು ಹಿಡಿದಿದ್ದಾರೆಯೇ ವಿನಹ ಉತ್ತರ ಕರ್ನಾಟಕದ ಬಗ್ಗೆ ಕಾಳಜಿಯಿಂದಲ್ಲ ಎಂದು ಕಿಡಿಕಾರಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News