ಬೆಳಗಾವಿ ಅಧಿವೇಶನ: ಸದನದಲ್ಲಿ ಧರಣಿ ಮುಂದುವರೆಸಲು ಬಿಜೆಪಿ ನಿರ್ಧಾರ
ಬೆಳಗಾವಿ, ಡಿ.20: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಬಗ್ಗೆ ಸ್ಪಷ್ಟತೆ ಹಾಗೂ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಬಳಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕ್ಷಮೆ ಯಾಚಿಸುವವರೆಗೆ ಸದನದಲ್ಲಿ ಧರಣಿ ಮುಂದುವರೆಸಲು ಪ್ರತಿಪಕ್ಷ ಬಿಜೆಪಿ ನಿರ್ಧರಿಸಿದೆ.
ಗುರುವಾರ ಸ್ಪೀಕರ್ ಸದನದ ಮುಂದೂಡಿದ ಬಳಿಕ ತಮ್ಮ ಕೊಠಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಬೆಳಗಾವಿಯಲ್ಲಿ ಅಧಿವೇಶನ ಆರಂಭವಾದ ದಿನದಿಂದಲೂ ನಾವು ಸದನದ ಕಲಾಪ ಸುಸೂತ್ರವಾಗಿ ನಡೆಯಲು ಸಂಪೂರ್ಣ ಸಹಕಾರ ನೀಡಿದ್ದೇವೆ. ಆದರೆ, ಸರಕಾರಕ್ಕೆ ಅಧಿವೇಶನ ನಡೆಯುವುದು ಬೇಕಾಗಿಲ್ಲ ಎಂದರು.
ಸದನದಲ್ಲಿ ನಾವು ನಿನ್ನೆಯಿಂದ ಧರಣಿ ನಡೆಸುತ್ತಿದ್ದೇವೆ. ಸರಕಾರದ ಒಬ್ಬ ಪ್ರತಿನಿಧಿಯೂ ನಮ್ಮನ್ನು ಭೇಟಿ ಮಾಡಿ, ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಬರಗಾಲದ ಮೇಲೆ ಚರ್ಚೆ ನಡೆಯಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬೇಕು. ಸ್ಥಗಿತವಾಗಿರುವ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ತೀರಿಸಲು 4 ವರ್ಷ ಕಾಲಾವಕಾಶ ಕೇಳಿದ್ದಾರೆ. ಆರು ತಿಂಗಳಲ್ಲಿ 50 ಕೋಟಿ ರೂ.ಮಾತ್ರ ಪಾವತಿಸಲಾಗಿದೆ. 46 ಸಾವಿರ ಕೋಟಿ ರೂ.ತೀರಿಸುವುದು ಯಾವಾಗ ಎಂದು ಪ್ರಶ್ನಿಸಿದ ಯಡಿಯೂರಪ್ಪ, ನಾನು ರಾಷ್ಟ್ರೀಕೃತ ಬ್ಯಾಂಕುಗಳ ಮೇಲೆ ಸಾಲ ಮನ್ನಾ ಯೋಜನೆ ಜಾರಿಯಾಗದಂತೆ ಒತ್ತಡ ಹೇರುತ್ತಿದ್ದೇನೆ ಎಂಬ ಧಾಟಿಯಲ್ಲಿ ಮುಖ್ಯಮಂತ್ರಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗೆ ದುರಂಹಕಾರ, ಅಧಿಕಾರದ ಮದ ನೆತ್ತಿಗೇರಿದೆ ಎಂಬುದು ಅವರು ನಿನ್ನೆ ಸದನದಲ್ಲಿ ಉತ್ತರ ನೀಡುವಾಗ ನಡೆದುಕೊಂಡ ರೀತಿಯೇ ಸಾಬೀತುಪಡಿಸುತ್ತದೆ. ಅವರು ಕೇವಲ 38 ಜನ ಇರುವುದನ್ನು ಮರೆತಿದ್ದಾರೆ. ಉತ್ತರಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆ. ಕಬ್ಬುಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಅಧಿವೇಶನ ಆರಂಭವಾದಗಿನಿಂದಲೂ ಸುವರ್ಣ ವಿಧಾನಸೌಧದ ಸುತ್ತಮುತ್ತ ಸಾವಿರಾರು ಜನರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಒಬ್ಬರ ಸಮಸ್ಯೆಗಳಿಗೂ ಈ ಸರಕಾರ ಸ್ಪಂದಿಸಿಲ್ಲ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾದಿಂದಾಗಿ ರಾಜ್ಯದ 23 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ ಎಂದು ಸರಕಾರ ಹೇಳುತ್ತಿದೆ. ಜಿಲ್ಲಾವಾರು ರೈತರ ಪಟ್ಟಿ ಬಿಡುಗಡೆ ಮಾಡಿ, ಋಣಮುಕ್ತ ಪತ್ರ ರೈತರಿಗೆ ಯಾವಾಗ ನೀಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು ಆಗ್ರಹಿಸಿದರು.