ದಾವಣಗೆರೆ ತಲುಪಿದ ಭಾರತೀಯ ಸಂಸ್ಕೃತಿ ಉತ್ಸವದ ಜಾಗೃತಿ ಜಾಥಾ

Update: 2018-12-20 17:55 GMT

ದಾವಣಗೆರೆ,ಡಿ.20: ವಿಜಯಪುರ ಜಿಲ್ಲೆಯ ಕಗ್ಗೊಡು ಗ್ರಾಮದ ರಾಮನಗೌಡ ಬಾಪುಗೌಡ ಪಾಟೀಲ್ (ಯತ್ನಾಳ್) ಗೋರಕ್ಷಾ ಕೇಂದ್ರದಲ್ಲಿ ಡಿ.24 ರಿಂದ 31ರವರೆಗೆ ಭಾರತ್ ವಿಕಾಸ್ ಸಂಗಮದ ವತಿಯಿಂದ ರಾಷ್ಟ್ರ ಮಟ್ಟದಲ್ಲಿ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವದ ಜಾಗೃತಿ ಜಾಥಾ ನಗರಕ್ಕೆ ಗುರುವಾರ ಆಗಮಿಸಿತು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರು ದೊಡ್ಡಪೇಠೆಯ ವಿರಕ್ತಮಠದಲ್ಲಿ ಜಾಥಾಕ್ಕೆ ಸ್ವಾಗತಿಸಿ, ಶುಭ ಕೋರಿದರು.

ಪ್ರಚಾರ ಜಾಥಾದ ಮುಖಂಡ ಜೂನಿಯರ್ ರಾಜಕುಮಾರ ಎಂದೇ ಖ್ಯಾತರಾದ ಅಶೋಕ ಬಸ್ತಿ ಮಾತನಾಡಿ, ಭಾರತೀಯ ಸಂಸ್ಕೃತಿ ಉತ್ಸವವು ಭಾರತೀಯ ಭವ್ಯ ಪರಂಪರೆ, ಇತಿಹಾಸದ ಮೇಲೆ ಬೆಳಕು ಚೆಲ್ಲಲಿದ್ದು, ಈ ಉತ್ಸವದ ಕುರಿತು ರಾಜ್ಯದ್ಯಂತ ಪ್ರಚಾರ ಕಾರ್ಯ ನಡೆದಿದೆ. ಡಿ.24ರಂದು ಬೆಳಿಗ್ಗೆ 10.30ಕ್ಕೆ ಭವ್ಯ ಮೆರವಣಿಗೆ ನಡೆಲಿಯದೆ. ದೇಶದ ಸಾಂಸ್ಕೃತಿಕ ಚಿತ್ರಣ ಬಿಂಬಿಸುವ ಕಲಾತಂಡಗಳು, ಸ್ಥಬ್ಧ ಚಿತ್ರಗಳು ಇದರಲ್ಲಿ ಇರಲಿವೆ. ಡಿ.25ರಂದು ಮಾತೃ ಸಂಗಮ ನಡೆಯಲಿದೆ. 50 ಸಾವಿರಕ್ಕೂ ಹೆಚ್ಚು ಮಾತೆಯರು ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಾತೃ ಭೋಜನ ಮಾಡಿಸುವರು. 26ರಂದು ಜ್ಞಾನ ಸಂಗಮ, 27ರಂದು ಕೃಷಿ ಸಂಗಮ, 28ರಂದು ಯುವ ಶಕ್ತಿ ಸಂಗಮ, 30ರಂದು ಗ್ರಾಮ ಸಂಗಮ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಡಿ.29 ಬೆಳಿಗ್ಗೆ 5.30ಕ್ಕೆ ಶ್ರೀ ಅಮೃತಾನಂದ ಸ್ವಾಮಿ, 30, 31ರಂದು ಬೆಳಿಗ್ಗೆ 5.30ಕ್ಕೆ ಬಾಬಾ ರಾಮ್‍ದೇವ್ ಅವರಿಂದ ಉಚಿತ ಯೋಗ ಶಿಬಿರ ನಡೆಯಲಿದೆ. ಕಾರ್ಯಕ್ರಮಗಳಲ್ಲಿ ವಿಶ್ವ ಪ್ರಸಿದ್ಧ ಕಲಾವಿದರು ಭಾಗವಹಿಸುವರು. ಜನಪದ ಹಾಡುಗಳು, ಏಕಪಾತ್ರಾಭಿನಯ ಸೇರಿದಂತೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಸ್ಕೃತಿ ಉತ್ಸವದ ಕುರಿತು ಎಲ್ಲಾ ಜಿಲ್ಲೆಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈಗ ಹಾವೇರಿಯಿಂದ ಬಂದಿದ್ದು, ದಾವಣಗೆರೆಯ ನಂತರ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಮಾಡಲಿದೆ ಎಂದರು.

ಈ ಸಂದರ್ಭದಲ್ಲಿ ಶಿಮುಶ ಕಾಲೇಜಿನ ಪ್ರಾಚಾರ್ಯ ರವಿ, ವ್ಯವಸ್ಥಾಪಕ ಶರಣಬಸವ, ಎಸ್.ಜೆ.ಎಂ.ಸ್ಕೂಲ್‍ನ ಮುಖ್ಯಗುರು ಲತಾ, ರಾಜೇಂದ್ರ ಪ್ರಸಾದ, ವೀಣಾ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News