ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನ: ಕೊಡಗಿನ ಮೂವರು ಬಾಲ ವಿಜ್ಞಾನಿಗಳು ಆಯ್ಕೆ
ಮಡಿಕೇರಿ, ಡಿ.21: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ವತಿಯಿಂದ ಡಿ.27 ರಿಂದ 31 ರವರೆಗೆ ಒರಿಸ್ಸಾದ ಭುವನೇಶ್ವರದಲ್ಲಿ ನಡೆಯಲಿರುವ 26ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಕೊಡಗಿನ 2 ಶಾಲೆಗಳಿಂದ ಮೂವರು ಕಿರಿಯ ವಿಜ್ಞಾನಿಗಳು (ಬಾಲ ವಿಜ್ಞಾನಿಗಳು) ಆಯ್ಕೆಯಾಗಿದ್ದಾರೆ.
ಮಡಿಕೇರಿ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಲೇಖನ ಮುತ್ತಕ್ಕ (ನಗರ ಹಿರಿಯ ವಿಭಾಗ), ಇದೇ ಶಾಲೆಯ ಎನ್.ಎನ್.ನಿರುತ್ (ನಗರ ಕಿರಿಯ ವಿಭಾಗ) ಹಾಗೂ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯ ಎಚ್.ಎಸ್.ತೇಜನ (ಗ್ರಾಮಾಂತರ ಹಿರಿಯ ವಿಭಾಗ) ಈ ಮೂವರು ಕಿರಿಯ ವಿಜ್ಞಾನಿಗಳು ಕರ್ನಾಟಕದ 30 ಮಂದಿ ಕಿರಿಯ ವಿಜ್ಞಾನಿಗಳ ಪೈಕಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಲಬುರಗಿ ನಗರದಲ್ಲಿ ಗುಲ್ಬರ್ಗಾ ವಿವಿ ಸಂಯುಕ್ತಾಶ್ರಯದಲ್ಲಿ ‘ಸ್ವಚ್ಛ ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಎಂಬ ಕೇಂದ್ರ ವಿಷಯದಡಿ ಇತ್ತೀಚೆಗೆ ಮೂರು ದಿನಗಳ ಕಾಲ ನಡೆದ 26ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮ್ಮೇಳನದಲ್ಲಿ ತಾವು ರೂಪಿಸಿದ ವೈಜ್ಞಾನಿಕಾ ಯೋಜನಾ ಪ್ರಬಂಧವನ್ನು ಉತ್ತಮವಾಗಿ ಮಂಡಿಸಿ ರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ ಎಂದು ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಸಂಯೋಜಕ ಸಿ.ಎಸ್.ಸುರೇಶ್ ಅವರು ತಿಳಿಸಿದ್ದಾರೆ.
ಕಲಬುರಗಿಯಲ್ಲಿ ನಡೆದ ಮಕ್ಕಳ ವಿಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಇಸ್ರೋ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಈ ಕಿರಿಯ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕೊಡಗು ವಿದ್ಯಾಲಯದ ಲೇಖನ ಮುತ್ತಕ್ಕ ತನ್ನ ಸಹಪಾಠ ರೋಸ್‍ಜೆ ತಚ್ಚಿಲ್ ಜೊತೆಗೂಡಿ ಮಾರ್ಗದರ್ಶಿ ಶಿಕ್ಷಕಿ ಶಿಲ್ಪ ಪೊನ್ನಮ್ಮ ಅವರ ಮಾರ್ಗದರ್ಶನದಲ್ಲಿ ಜೀವಿ ಪರಿಸರ ಮತ್ತು ಪರಿಸರ ಸೇವೆಗಳು, ಎಂಬ ಉಪ ವಿಷಯದಡಿ ಕಣ್ಮರೆಯಾಗುತ್ತಿರುವ ಜಿಲ್ಲೆಯ ಝರಿ ತೊರೆಗಳು ಪರಿಸರ ವ್ಯವಸ್ಥೆಗೆ ಮಾರಕ ಎಂಬ ಯೋಜನೆ ಕುರಿತು ರೂಪಿಸಿದ್ದ ಪ್ರಬಂಧ ಮಂಡನೆ ಆಯ್ಕೆಯಾಗಿದೆ. ವಿದ್ಯಾರ್ಥಿನಿ ಲೇಖನ ಮುತ್ತಕ್ಕ ನಗರದ ಇಂಜಿನಿಯರ್ ಮೂವೇರ ಇ.ಸುರೇಶ್ ಮತ್ತು ಎ.ಯು.ದೇಚಮ್ಮ ದಂಪತಿಯ ಪುತ್ರಿಯಾಗಿದ್ದಾರೆ.
ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಎಚ್.ಎಸ್.ತೇಜನಾ ಮಾರ್ಗದರ್ಶಿ ಶಿಕ್ಷಕಿ ಸಿಸ್ಟರ್ ವೀಣಾ ವಿಜಯ ಕ್ಯಾಸ್ಟಲೀನೋ ಮಾರ್ಗದರ್ಶನದಲ್ಲಿ ತನ್ನ ಸಹಪಾಠಿ ಎನ್.ಡಿ. ಅಖಿಲಾ ಜೊತೆಗೂಡಿ, ತ್ಯಾಜ್ಯದಿಂದ ಸಂಪತ್ತು, ಎಂಬ ಉಪ ವಿಷಯದಡಿ, ಜೈವಿಕ ಪ್ಲಾಸ್ಟಿಕ್ ಬಳಕೆ ಎಂಬ ಯೋಜನೆ ಕುರಿತು ರೂಪಿಸಿ ಮಂಡಿಸಿದ ಪ್ರಬಂಧವು ಗ್ರಾಮಾಂತರ ಹಿರಿಯ ವಿಭಾಗದಿಂದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿನಿ ತೇಜನ ಕಣಿವೆ ಬಳಿಯ ಹುಲುಸೆ ಗ್ರಾಮದ ಕೃಷಿಕ ಕುಟುಂಬದ ಶೇಖರ್ ಮತ್ತು ಜ್ಯೋತಿ ದಂಪತಿಯ ಪುತ್ರಿಯಾಗಿದ್ದಾರೆ.
ನಗರದ ಕೊಡಗು ವಿದ್ಯಾಲಯದ ವಿದ್ಯಾರ್ಥಿ ಎನ್.ಎನ್.ನಿರುತ್ ಮಾರ್ಗದರ್ಶಿ ಶಿಕ್ಷಕಿ ಎನ್.ಎಸ್.ಇಶ್ರತ್ ಅವರ ಮಾರ್ಗದರ್ಶನದಲ್ಲಿ ತನ್ನ ಸಹಪಾಠಿ ಸಫಾನ್ ಬಶೀರ್ ಜೊತೆಗೂಡಿ ಆಧುನಿಕ ಜೀವನ ಶೈಲಿಯ ಕೊಡುಗೆಯೇ ಅನಾರೋಗ್ಯಕರ ಬದುಕು. ಇದಕ್ಕೆ ವರಪ್ರಸಾದವಾಗಿರುವ ಗಿಬ್ರಾ, ಸಿದ್ದೌಷಧ, ಎಂಬ ಯೋಜನೆ ಕುರಿತು ರೂಪಿಸಿ ಮಂಡಿಸಿದ ಪ್ರಬಂಧ ಮಂಡನೆಯು ನಗರದ ಕಿರಿಯ ವಿಭಾಗದಲ್ಲಿ ರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಗೊಂಡಿದೆ. ವಿದ್ಯಾರ್ಥಿ ನಿರುತ್ ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯ ದಂಪತಿ ಡಾ.ನೆರಿಯನ ಎಸ್.ನವೀನ್ ಮತ್ತು ಡಾ.ಬಿ.ಕೆ.ರಾಜೇಶ್ವರಿ ಅವರ ಪುತ್ರ.
ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಜಿಲ್ಲೆಯಿಂದ ಸಮಾವೇಶದ ಜಿಲ್ಲಾ ಶೈಕ್ಷಣಿಕ ಸಂಯೋಜಕ ಜಿ.ಶ್ರೀಹರ್ಷ, ಜಿಲ್ಲಾ ಸಮಾವೇಶದ ಮಾರ್ಗದರ್ಶಿ ಶಿಕ್ಷಕರೂ ಆದ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್, ಸಂಪನ್ಮೂಲ ವ್ಯಕ್ತಿ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಜಿ.ಶ್ರೀನಾಥ್, ಮಾರ್ಗದರ್ಶಿ ಶಿಕ್ಷಕಿಯರಾದ ಅಶ್ರತ್, ಜಯಶ್ರೀ, ಹರೀಶ್, ಪ್ರೋರನಾ ನೃತ್ಯ, ಸಬೀತಾ ವಿದ್ಯಾರ್ಥಿಗಳೊಂದಿಗೆ ಮಾರ್ಗದರ್ಶಿ ಶಿಕ್ಷಕರಾಗಿ ತೆರಳಿದ್ದರು.
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನವು ಮಕ್ಕಳಲ್ಲಿ ಮೂಲ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸುವುದರೊಂದಿಗೆ ಅವರಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸಲು ಉತ್ತಮ ವೇದಿಕೆ ರೂಪಿಸಲು ನೆರವಾಗಿದೆ ಎಂದು ಮಕ್ಕಳ ವಿಜ್ಞಾನ ಸಮ್ಮೇಳನದ ಜಿಲ್ಲಾ ಸಂಘಟಕರೂ ಆದ ವಿಜ್ಞಾನ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಅವರು ತಿಳಿಸಿದ್ದಾರೆ.