ಉ.ಕ ಬಗ್ಗೆ ಚರ್ಚಿಸಲು ಇದ್ದ ಅವಕಾಶವನ್ನು ಧರಣಿ ಮೂಲಕ ವ್ಯರ್ಥ ಮಾಡಿದ ಬಿಜೆಪಿ: ಕುಮಾರಸ್ವಾಮಿ ಟೀಕೆ

Update: 2018-12-21 14:00 GMT

ಬೆಳಗಾವಿ, ಡಿ.21: ರೈತರ ಸಾಲಮನ್ನಾ ಯೋಜನೆ ಸಂಬಂಧ ಸರಕಾರದ ವತಿಯಿಂದ ಅಂಕಿ, ಅಂಶಗಳ ಸಮೇತ ಸದನದಲ್ಲಿ ನೀಡಿದ ಸುದೀರ್ಘ ಉತ್ತರವನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗಲಿಲ್ಲ. ಸರಕಾರದ ವಿರುದ್ಧ ಹೋರಾಟ ಮಾಡಲು ಅವರಿಗೆ ಯಾವುದೇ ವಿಷಯಗಳಿಲ್ಲದೆ ಇರುವುದರಿಂದ, ಕೊನೆಯ ಕ್ಷಣದಲ್ಲಿ ಧರಣಿ ಕೈಗೊಂಡರು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಶುಕ್ರವಾರ ಸುವರ್ಣ ವಿಧಾನಸೌಧದಲ್ಲಿ ಉಭಯ ಸದನಗಳ ಅಧಿವೇಶನ ಮುಂದೂಡಲ್ಪಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾ ಬಗ್ಗೆ ನಾನು ಅಂಕಿ, ಅಂಶಗಳ ಸಹಿತ ಮಾಹಿತಿ ನೀಡಲು ತಯಾರಾಗಿ ಸದನಕ್ಕೆ ಬಂದಿದ್ದೆ. ರಾಜ್ಯದ ಜನತೆಯಲ್ಲಿರುವ ಗೊಂದಲಗಳನ್ನು ನಿವಾರಿಸಲು ಮುಂದಾಗಿದ್ದೆ. ಆಗ ಉದ್ದೇಶಪೂರ್ವಕವಾಗಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು ಎಂದರು.

ಅಧಿವೇಶನದ ಆರಂಭದಲ್ಲಿ ನೀಡಿದ್ದ ಸಹಕಾರವನ್ನು, ಸಾಲಮನ್ನಾ ಬಗ್ಗೆ ನಾನು ಉತ್ತರ ನೀಡುವ ವೇಳೆ ಬಿಜೆಪಿಯವರು ಯಾಕೆ ನೀಡಲಿಲ್ಲ. ಧರಣಿ ಮಾಡುವ ನಿಲುವನ್ನು ಅವರು ಯಾಕೆ ತೆಗೆದುಕೊಂಡರು ಅನ್ನೋದು ನನಗೆ ಗೊತ್ತಾಗುತ್ತಿಲ್ಲ. ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ತಮ್ಮ ಅನುಭವದ ಹಿನ್ನೆಲೆಯಲ್ಲಿ ಮಾಡುವ ಟೀಕೆಗಳನ್ನು ಸಲಹೆಗಳೆಂದು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸವುದಾಗಿ ಸದನದಲ್ಲಿ ಹೇಳಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಷ್ಟು ಬಾರಿ ರೈತರ ಪರವಾಗಿ ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕೇಂದ್ರ ಸರಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ತಮಿಳುನಾಡಿನ ರೈತರು ಹೊಸದಿಲ್ಲಿಯಲ್ಲಿ ಎರಡು ತಿಂಗಳುಗಳ ಕಾಲ ಅರೆಬೆತ್ತಲೆ ಮೆರವಣಿಗೆ ಮಾಡಿದರು. ಒಂದು ದಿನವಾದರೂ ಪ್ರಧಾನಿ ರೈತರನ್ನು ಕರೆದು ಮಾತನಾಡಿಸಲಿಲ್ಲ. ಕಳೆದ ತಿಂಗಳು ಒಂದು ಲಕ್ಷಕ್ಕೂ ಹೆಚ್ಚು ರೈತರು ಹೊಸದಿಲ್ಲಿಯಲ್ಲಿ ಪ್ರತಿಭಟನೆ ಮಾಡಿದರು. ಪ್ರಧಾನಿಯಾಗಲಿ, ಕೇಂದ್ರದ ಸಚಿವರಾಗಲಿ ರೈತರನ್ನು ಭೇಟಿ ಮಾಡುವ ಸೌಜನ್ಯ ತೋರಿಸಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಸಮ್ಮಿಶ್ರ ಅಧಿಕಾರಕ್ಕೆ ಬಂದ ಕಳೆದ ಆರು ತಿಂಗಳಲ್ಲಿ 5 ಬಾರಿ ರೈತರ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದೇನೆ. ರೈತರ ಮುಖಂಡರ ಜೊತೆ ಚರ್ಚೆಗಳನ್ನು ಮಾಡಿದ್ದೇನೆ. ರೈತರು, ನಮ್ಮ ಅಧಿಕಾರಿಗಳು ಕೊಟ್ಟಿರುವ ಸಲಹೆಗಳನ್ನು ಆಧರಿಸಿ, ಬ್ಯಾಂಕುಗಳು ಸಾಲ ನೀಡುವ ವ್ಯವಸ್ಥೆಯಲ್ಲಿ ಇರುವ ಲೋಪಗಳ ಮಾಹಿತಿ ಪಡೆದು, ಒಂದು ಹೊಸ ಮಾದರಿಯ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ರಾಜ್ಯದ 6.50 ಕೋಟಿ ಜನರ ದುಡ್ಡನ್ನು, ರೈತರ ಸಾಲಮನ್ನಾ ಯೋಜನೆಯ ಹೆಸರಿನಲ್ಲಿ ಯಾರೋ ಮಧ್ಯವರ್ತಿಗಳು ಹಣ ಲಪಟಾಯಿಸಬಾರದು ಎಂಬ ಉದ್ದೇಶದಿಂದ, ಕ್ರಮಬದ್ಧವಾದ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡುವಾಗ, ವಿರೋಧ ಪಕ್ಷದ ನಾಯಕ ಯಡಿಯೂರಪ್ಪರನ್ನು ಆಮಂತ್ರಣ ಕೊಟ್ಟು, ನಮ್ಮ ಜೊತೆಯಲ್ಲಿ ಕೂರಿಸಿಕೊಂಡು ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ತಿಳಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರಾರಂಭಿಕ ಹಂತದಲ್ಲಿ ಅತ್ಯಂತ ಸುಗಮವಾಗಿ ಅಧಿವೇಶನದ ಕಲಾಪ ನಡೆಯುವುದರಲ್ಲಿ ಎಲ್ಲ ಸದಸ್ಯರು ಸಹಕಾರ ನೀಡಿದ್ದಾರೆ. ಸ್ಪೀಕರ್ ಹಾಗೂ ಸಭಾಪತಿ ಎರಡು ಸದನಗಳನ್ನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ನಡೆಸಿದ್ದಾರೆ. ಅದಕ್ಕಾಗಿ, ಅವರಿಬ್ಬರಿಗೆ ವಿಶೇಷ ವಂದನೆಗಳು ಹಾಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದಲ್ಲಿನ ಬರಗಾಲದ ಬಗ್ಗೆ ಬಿಜೆಪಿಯ 30, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ 9 ಸದಸ್ಯರು ಸುದೀರ್ಘವಾಗಿ 9 ಗಂಟೆ 30 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಸರಕಾರದ ವತಿಯಿಂದ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಕೃಷಿ ಹಾಗೂ ಪಶುಸಂಗೋಪನೆ ಸಚಿವರು ಬಹಳ ತಾಳ್ಮೆಯಿಂದ, ಸದಸ್ಯರು ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಉತ್ತರ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಸದನದಲ್ಲಿ ಯಡಿಯೂರಪ್ಪ ಮಾಡಿರುವ ತುಣಕುಗಳನ್ನೆ ನಾನು ಉದಾಹರಣೆಯಾಗಿ ನೀಡಿದೆ. ನಿರಂತರವಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಜೊತೆ ಸಂಪರ್ಕದಲ್ಲಿದ್ದು, ರೈತರಿಗೆ ಈ ಯೋಜನೆಯಿಂದ ಅನುಕೂಲವಾಗಬಾರದು ಎಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ನಾನು ಹೇಳಿದ್ದು ನಿಜ. ಆ ಬಗ್ಗೆ ಬಿಜೆಪಿಯವರು ಸ್ಪಷ್ಟಣೆ ಕೇಳುವ ಬದಲು, ಧರಣಿ ನಡೆಸಿದರು. ಸದನ ನಡೆಯಲು ಬಿಟ್ಟಿಲ್ಲ. ಉತ್ತರಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶವಿತ್ತು. ಅದನ್ನು ಧರಣಿ ಮೂಲಕ ವ್ಯರ್ಥ ಮಾಡಿಕೊಂಡರು. 

ಅಧಿವೇಶನದ ಕೊನೆಯ ದಿನವಾದ ಇಂದಾದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸದನಕ್ಕೆ ಬಂದು ಕ್ಷಮೆಯಾಚಿಸಿ, ಪ್ರತಿಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದನ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ, ಅವರು ತಮ್ಮ ಸೊಕ್ಕು, ಧಿಮಾಕನ್ನು ಮುಂದುವರೆಸಿದ್ದಾರೆ. ಅವರಿಗೆ ರಾಜ್ಯದ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ.

-ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News