ವಿಧಾನ ಪರಿಷತ್ ನಲ್ಲಿ 9 ವಿಧೇಯಕಗಳ ಅಂಗೀಕಾರ: ಸದನ ಅನಿರ್ದಿಷ್ಟಾವಧಿ ಮುಂದೂಡಿಕೆ

Update: 2018-12-21 14:22 GMT

ಬೆಳಗಾವಿ, ಡಿ.21: ವಿಧಾನ ಪರಿಷತ್ತಿನ ಅಧಿವೇಶನವು ಡಿ.10 ರಿಂದ 21 ರವರೆಗೆ ಒಟ್ಟು ಹತ್ತು ದಿನಗಳ ಕಾಲ ನಡೆಯಿತು. ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ಒಂಬತ್ತು ವಿಧೇಯಕಗಳಿಗೆ ಮೇಲ್ಮನೆ ಅಂಗೀಕಾರ ನೀಡಿತು. ಶೂನ್ಯ ವೇಳೆಯಲ್ಲಿ 47 ಸೂಚನೆಗಳನ್ನು ಸ್ವೀಕರಿಸಿ, 22 ಸೂಚನೆಗಳಿಗೆ ಉತ್ತರಿಸಲಾಯಿತು ಎಂದು ತಿಳಿಸಿದ ಸಭಾಪತಿ ಕೆ.ಪ್ರತಾಪ ಚಂದ್ರಶೆಟ್ಟಿ, ಸದನವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆ ಎಂದು ಪ್ರಕಟಿಸಿದರು.

ಮೇಲ್ಮನೆಯಲ್ಲಿ ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷದ ಸದಸ್ಯರು ಧರಣಿ ಮುಂದುವರೆಸಿದರು. ಸದನವನ್ನು ಮಧ್ಯಾಹ್ನ 12 ಗಂಟೆಗೆ ಸಭಾಪತಿಗಳು ಮುಂದೂಡಿದರು. ಬಳಿಕ ಮಧ್ಯಾಹ್ನ 12 ಗಂಟೆಗೆ ಸದನ ಮರು ಸಮಾವೇಶಗೊಂಡಾಗ ಪ್ರತಿಪಕ್ಷಗಳ ಪ್ರತಿಭಟನೆಯ ಮಧ್ಯೆಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಭಾನಾಯಕಿ ಡಾ.ಜಯಮಾಲಾ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ, ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ಎರಡು ವಿಧೇಯಕಗಳನ್ನು ಮಂಡಿಸಿ, ವಿಧಾನ ಪರಿಷತ್ತಿನಿಂದ ಅಂಗೀಕಾರ ಪಡೆದುಕೊಂಡರು.

ಪ್ರಸ್ತುತ ಅಧಿವೇಶನದಲ್ಲಿ 1347 ಪ್ರಶ್ನೆಗಳನ್ನು ಸ್ವೀಕರಿಸಲಾಗಿತ್ತು. 150 ಪ್ರಶ್ನೆಗಳು ಚುಕ್ಕೆ ಗುರುತಿನ ಪ್ರಶ್ನೆಗಳಾಗಿದ್ದವು. 123 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು. 27 ಪ್ರಶ್ನೆಗಳಿಗೆ ಉತ್ತರಗಳನ್ನು ಮಂಡಿಸಲಾಯಿತು. ಒಟ್ಟು 1197 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಪೈಕಿ 889 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರವನ್ನು ಮಂಡಿಸಲಾಯಿತು.

ನಿಯಮ 58ರ ಅಡಿ ಅರ್ಧ ಗಂಟೆ ಕಾಲಾವಧಿ ಚರ್ಚೆಯಡಿ ಮೂರು ಸೂಚನೆಗಳನ್ನು ಸ್ವೀಕರಿಸಲಾಯಿತು. ನಿಯಮ 72ರ ಅಡಿಯಲ್ಲಿ 224 ಸೂಚನೆಗಳನ್ನು ಸ್ವೀಕರಿಸಿ, ಆ ಪೈಕಿ ಎಂಟು ಸೂಚನೆಗಳಿಗೆ ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು. ಉಳಿದ 216 ಸೂಚನೆಗಳ ಪೈಕಿ 41 ಸೂಚೆನಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಯಿತು. ನಿಯಮ 330ರ ಅಡಿಯಲ್ಲಿ 105 ಸೂಚನೆಗಳನ್ನು ಸ್ವೀಕರಿಸಿ, ಆ ಪೈಕಿ ಏಳು ಸೂಚನೆಗಳನ್ನು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು. ಉಳಿದ 98 ಸೂಚನೆಗಳ ಪೈಕಿ 19 ಸೂಚನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು.

ನಿಯಮ 59ರ ಅಡಿಯಲ್ಲಿ ಮೂರು ಸೂಚನೆಗಳನ್ನು ಸ್ವೀಕರಿಸಿ, ಆ ಪೈಕಿ ಎರಡು ಸೂಚನೆಗಳನ್ನು ನಿಯಮ 68ಕ್ಕೆ ಪರಿರ್ವತಿಸಿ ಸರ್ಕಾರದಿಂದ ಉತ್ತರಿಸಲಾಯಿತು. ನಿಯಮ 68ರ ಅಡಿಯಲ್ಲಿ ಎರಡು ಸೂಚನೆಗಳನ್ನು ಸ್ವೀಕರಿಸಲಾಗಿರುತ್ತದೆ ಎಂದು ಸಭಾಪತಿ ಕೆ.ಪ್ರತಾಪ ಚಂದ್ರಶೆಟ್ಟಿ ಅವರು ವಿಧಾನ ಪರಿಷತ್ತಿನ ಪ್ರಸ್ತುತ ಅಧಿವೇಶನದ ಉಪವೇಶನದ ಸಾರಾಂಶದಲ್ಲಿ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News