ಪರೀಕ್ಷೆ ಬರೆಯಲು ಅವಕಾಶ ನಿರಾಕರಣೆ: ದಸಂಸ ಕಾರ್ಯಕರ್ತರಿಂದ ಅಹೋರಾತ್ರಿ ಧರಣಿ
ಮೈಸೂರು,ಡಿ.21: ಕಾನೂನು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರವೇಶಪತ್ರ ನೀಡಲು ನಿರಾಕರಿಸಿದ ಶಾರದವಿಲಾಸ ಕಾಲೇಜು ಪ್ರಾಂಶುಪಾಲರ ವಿರುದ್ಧ ದಸಂಸ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ನಡೆಸಿದರು.
ಶಾರದ ವಿಲಾಸ ಕಾನೂನು ಕಾಲೇಜಿನ ಸುಮಾರು 125 ವಿದ್ಯಾರ್ಥಿಗಳಿಗೆ ಅಲ್ಲಿನ ಪ್ರಾಂಶುಪಾಲರು ಹಾಜರಾತಿ ಕಡಿಮೆ ಇದೆ ಎಂಬ ಕಾರಣ ಒಡ್ಡಿ ಕಿರುಕುಳ ನೀಡಿದ್ದಲ್ಲದೆ, ಇಂದಿನಿಂದ ಪ್ರಾರಂಭವಾಗುತ್ತಿರುವ ಪರೀಕ್ಷೆಯ ಪ್ರವೇಶಪತ್ರ ಕೊಡದೆ ಮಾನಸಿಕ ಹಿಂಸೆ ನೀಡಿದ್ದರು ಎನ್ನಲಾಗಿದೆ.
ವಿಷಯ ತಿಳಿದು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ರಾತ್ರಿಯಿಂದಲೇ ಕಾಲೇಜಿನ ಮುಂಭಾಗ ವಿದ್ಯಾರ್ಥಿಗಳ ಜೊತೆಗೂಡಿ ಅಹೋರಾತ್ರಿ ಧರಣಿ ನಡೆಸಿದರು. ಇದಕ್ಕೆ ಮಣಿದ ಕಾಲೇಜು ಆಡಳಿತ ಮಂಡಳಿ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿ ಪ್ರವೇಶ ಪತ್ರ ನೀಡಿದ ನಂತರ ಧರಣಿಯನ್ನು ವಾಪಸ್ ಪಡೆಯಲಾಯಿತು.
ಇದೇ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಶಾರದ ವಿಲಾಸ ಕಾಲೇಜಿನಲ್ಲಿ ಹಲವಾರು ಭ್ರಷ್ಟಾಚಾರ ನಡೆಯುತ್ತಿದ್ದು, ವಿದ್ಯಾರ್ಥಿಗಳು ಡೊನೇಷನ್ ಹಣವನ್ನು ಸಂದಾಯ ಮಾಡಿಲ್ಲ ಎಂಬ ಕಾರಣಕ್ಕ ಅಲ್ಲಿನ ಪ್ರಾಂಶುಪಾಲರು ಹಾಜರಾತಿ ನೆಪ ಒಡ್ಡಿ ಪ್ರವೇಶ ಪತ್ರ ನೀಡದೆ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡಲು ಮುಂದಾಗಿದ್ದಾರೆ. ಇಲ್ಲಿ ಅತೀ ಹೆಚ್ಚು ದಲಿತ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿದ್ದು, ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಪಡಿಸುವ ಯತ್ನಕ್ಕೆ ಕೈಹಾಕಿದರು. ನಮ್ಮ ಮತ್ತು ವಿದ್ಯಾರ್ಥಿಗಳ ಹೋರಾಟಕ್ಕೆ ಕಾಲೇಜು ಆಡಳಿತ ಮಂಡಳಿ ಮಣಿದು ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿದೆ ಎಂದು ಹೇಳಿದರು.
ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಬೇಕು ಮತ್ತು ಒಬ್ಬರಿಗೊಂದು ಎಂಬ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಎಡೆದೊರೆ ಮಹದೇವಯ್ಯ, ಕೆ.ವಿ.ದೇವೇಂದ್ರ, ಕೆ.ಆರ್.ಗೋಪಾಕೃಷ್ಣ, ಜನಸಂಗ್ರಾಮ ಪರಿಷತ್ ವಿಭಾಗೀಯ ಸಂಚಾಲಕ ನಗರ್ಲೆ ವಿಜಯಕುಮಾರ್, ವಿದ್ಯಾರ್ಥಿಗಳಾದ ಹರೀಶ್, ರಾಘವೇಂದ್ರ, ವಿನೋದ್, ಮಮತ, ಅಶ್ವಿನಿ ರಾಜೇಂದ್ರ, ಗೌತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.