ಚಳಿಗಾಲದ ಅಧಿವೇಶನ ಜನರಿಗೆ ಹೊರೆಯುಂಟು ಮಾಡಿದೆ: ಕೆ.ಎಸ್.ಈಶ್ವರಪ್ಪ

Update: 2018-12-21 17:36 GMT

ದಾವಣಗೆರೆ,ಡಿ.21: ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಜನರಿಗೆ ಹೊರೆಯುಂಟು ಮಾಡಿದ ಅಧಿವೇಶನ ಎಂದು ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನ್ನೊಂದು ದಿನಗಳ ಅಧಿವೇಶನದಲ್ಲಿ ಉ.ಕ ಅಭಿವೃದ್ಧಿ, ರಾಜ್ಯದ ನೀರಾವರಿ, ರೈತರ ಸಮಸ್ಯೆಗಳು ಸೇರಿದಂತೆ ಯಾವುದೇ ಪ್ರಮುಖವಾದ ವಿಷಯಗಳ ಬಗ್ಗೆ ಚರ್ಚೆಯಾಗದೆ ವ್ಯರ್ಥವಾಯಿತು ಎಂದರು. 

ಸಾಲ ಮನ್ನಾ ಆಗದಂತೆ ಬಿಜೆಪಿಯವರು ನೋಡಿಕೊಳ್ಳುತ್ತಿದ್ದಾರೆ ಎಂಬ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸಮ್ಮಿಶ್ರ ಸರಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಆದರೆ ಇರುವಷ್ಟು ದಿನ ಜನರಿಗೆ ನೀಡಿದ ಭರವಸೆಗಳನ್ನು ಜಾರಿಗೆ ತರುವ ಮೂಲಕ ವಿಶ್ವಾಸ ಉಳಿಸಿಕೊಳ್ಳಬೇಕೆಂದರು. ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳಿಗೆ ಬಿಜೆಪಿ ತಂಡದವರು ಭೇಟಿ ನೀಡಿ ಅಲ್ಲಿನ ಸಮಸ್ಯೆ ಬಗ್ಗೆಯೂ ಸರಕಾರದ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಕ್ರಮಕೈಗೊಳ್ಳದ ಮೂರ್ಖ ಸರಕಾರ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರೂ ಕೂಡಾ ಯಾವುದೇ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಬರೀ ಘೋಷಣೆಗೆ ಸೀಮಿತವಾಗುತ್ತಿದೆ. ಕುಡಿಯುವ ನೀರಿಗೆ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಅಧಿಕಾರಿಗಳಿಗೆ ಕೇಳಿದರೆ, ಕೇವಲ 25 ಲಕ್ಷ ರೂ.ಗಳು ಬಂದಿವೆ ಎಂದು ಹೇಳುತ್ತಾರೆ ಎಂದು ಆರೋಪಿಸಿದರು.

ಶಾಸಕ ಪ್ರೊ.ಲಿಂಗಣ್ಣ, ಪಕ್ಷದ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ರಮೇಶ್ ನಾಯಕ್, ಮುಕುಂದಪ್ಪ, ಎನ್.ರಾಜಶೇಖರ್, ಸೋಮಣ್ಣ ಬೇವಿನ ಮರದ ಸೇರಿದಂತೆ ಮತ್ತಿತರರು ಇದ್ದರು.

ಜಿಪಂ ಸಿಇಓ ಹಾಗೂ ಉಪ ಕಾರ್ಯದರ್ಶಿ ಅವರ ವಿರುದ್ಧ ಜಿ.ಪಂ. ಅಧ್ಯಕ್ಷರು ಎಸಿಬಿಗೆ ನೀಡಿರುವ ದೂರು ಹಾಗೂ ಈ ಕುರಿತು ನಮ್ಮ ಪಕ್ಷದ ಸದಸ್ಯರು ಕೈಗೊಂಡ ಕ್ರಮದ ಕುರಿತು ಪಕ್ಷದ ಜಿಲ್ಲಾ ಕೋರ್ ಕಮಿಟಿ ಸದಸ್ಯರು ಸಭೆ ಸೇರಿ ಚರ್ಚಿಸಲಿದ್ದೇವೆ. ದೂರು ನೀಡುವುದಕ್ಕಿಂತಲೂ ಮುಂಚೆ ಪಕ್ಷದ ಸದಸ್ಯರನ್ನು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ ಆ ರೀತಿ ಮಾಡಿಲ್ಲ. ನಮ್ಮ ಪಕ್ಷದ ಎಲ್ಲಾ ಸದಸ್ಯರನ್ನು ಆಹ್ವಾನಿಸಿದ್ದೇವೆ. ಎಲ್ಲರೂ ಸೇರಿ ಮುಕ್ತವಾಗಿ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.

-ಬಿಜೆಪಿ ಜಿಲ್ಲಾಧ್ಯಕ್ಷ, ಯಶವಂತರಾವ್ ಜಾಧವ್    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News