ದತ್ತಮಾಲಾ ಅಭಿಯಾನದ ಶೋಭಾಯಾತ್ರೆಗೆ ತೆರೆ

Update: 2018-12-21 17:57 GMT

ಚಿಕ್ಕಮಗಳೂರು, ಡಿ.21: ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಆಯೋಜಿಸಲಾಗಿದ್ದ ದತ್ತಜಯಂತಿ, ದತ್ತಮಾಲಾ ಅಭಿಯಾನದ ಶೋಭಾಯಾತ್ರೆ ಶಾಂತಿಯುತವಾಗಿ ತರೆಕಂಡಿತು. ಪೊಲೀಸರ ಬಿಗಿ ಭದ್ರತೆ ಹಾಗೂ ಡ್ರೋಣ್ ಕ್ಯಾಮರಾದ ಕಣ್ಗಾವಲಿನಲ್ಲಿ  ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ದತ್ತಮಾಲಾಧಾರಿಗಳು ಶೋಭಾ ಯಾತ್ರೆಯಲ್ಲಿ ಭಾಗಿಯಾಗಿದ್ದರು. 

ನಗರದ ಕಾಮಧೇನು ಗಣಪತಿ ದೇವಾಲಯದಿಂದ ಮಧ್ಯಾಹ್ನದ ವೇಳೆಗೆ ಆರಂಭವಾದ ಶೋಭಾಯತ್ರೆ ಕೆಇಬಿ ವೃತ್ತದ ಮೂಲಕ ಬಸವನಹಳ್ಳಿ ಮುಖ್ಯ ರಸ್ತೆಯಿಂದ ಹನುಮಂತಪ್ಪ ವೃತ್ತದ ಮೂಲಕ ಆಜಾದ್‍ಮೈದಾನ ತಲುಪಿದರು. ಶೋಭಾಯಾತ್ರೆ ಸಂಚರಿಸುವ ಮಾರ್ಗದ ಎರಡೂ ಬದಿಯಲ್ಲಿ ಸಾರ್ವಜನಿಕರು ನಿಂತು ಮೆರವಣಿಗೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರೆ, ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರು.

ಪ್ರತಿವರ್ಷದಂತೆ ಈ ಬಾರಿಯೂ ಶೋಭಾಯಾತ್ರೆಯಲ್ಲಿ ದತ್ತವಿಗ್ರಹ, ಚಂಡೆ, ವೀರಗಾಸೆ, ವೀರಭದ್ರನ ಕುಣಿತ, ಗೊಂಬೆಕುಣಿತ, ಮಂಗಳವಾದ್ಯ, ನಾಸಿಕ್ ಡೋಲ್ ಮತ್ತು ಡಿಜೆ ವಾದ್ಯಗೋಷ್ಠಿಗಳಿದ್ದವು. ವಾದ್ಯಗೋಷ್ಠಿಗೆ ತಕ್ಕಂತೆ ಮಾಲಾಧಾರಿಗಳು ನೃತ್ಯ ಮಾಡುತ್ತಿದ್ದರು. ಮತ್ತೆ ಕೆಲವು ಯುವಕರು ಬೃಹದಾಕಾರದ ಕೇಸರಿ ಧ್ವಜ ಮತ್ತು ಭಗವಾಧ್ವಜಗಳನ್ನು ಹಿಡಿದು ಕುಣಿದು ಕುಪ್ಪಳಿಸಿದರು. ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಚಂಡೇವಾದನಕ್ಕೆ ಹೆಜ್ಜೆ ಹಾಕುವ ಮೂಲಕ ಮೆರವಣಿಗೆಯ ಕೇಂದ್ರಬಿಂದುವಾದರು.

ಶೋಭಾಯಾತ್ರೆಗೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಾಲಾಧಾರಿಗಳ ಸಂಖ್ಯೆ ಹೆಚ್ಚಾಗಿತ್ತು. ಜಯಂತಿಯ ಕೊನೆಯ ದಿನ ಪೀಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.

ಪೊಲೀಸ್ ವರಿಷ್ಟಾಧಿಕಾರಿ ಹರೀಶ್ ಪಾಂಡೆ ಮೆರವಣಿಗೆಯ ಭದ್ರತೆ ನೇತೃತ್ವ ವಹಿಸಿದ್ದರು. ರಕ್ಷಣಾ ಕಾರ್ಯಕ್ಕೆ ರ್ಯಾಪಿಡ್ ಆಕ್ಷನ್ ಫೋರ್ಸ್, ಶ್ವಾನದಳ, ಬಾಂಬ್ ನಿಷ್ಕ್ರೀಯದಳ ನಿಯೋಜಿಸುವ ಮೂಲಕ ಅಹಿತಕರ ಘಟನೆಗಳು ಜರುಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಶೋಭಾಯಾತ್ರೆಯಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಮತ್ತು ಬಿಜೆಪಿ ಮುಖಂಡರಾದ ವಿ.ಎಚ್.ಪಿ.ಯ ಶಿವಶಂಕರ್ ಪ್ರೇಮ್‍ಕಿರಣ್, ಶಿವಶಂಕರ್, ಯೋಗೀಶ್‍ ರಾಜ್‍ಅರಸ್, ಶಾಸಕ ಸಿ.ಟಿ.ರವಿ, ಮಹಿಳಾ ಮುಖಂಡರಾದ ಜಸಂತ ಅನಿಲ್‍ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News