ದತ್ತಜಯಂತಿ ಭದ್ರತೆ ನೆಪದಲ್ಲಿ ಬಂದ್ ಸರಿಯಲ್ಲ: ಸಿ.ಟಿ.ರವಿ

Update: 2018-12-21 18:27 GMT

ಚಿಕ್ಕಮಗಳೂರು, ಡಿ.21: ದತ್ತಜಯಂತಿ ಹಿಂದುಗಳ ಪವಿತ್ರ ಹಬ್ಬಗಳಲ್ಲೊಂದಾಗಿದೆ. ಜಿಲ್ಲಾದ್ಯಂತ ದತ್ತಜಯಂತಿ ಹಿನ್ನೆಲೆಯಲ್ಲಿ ಸಂಭ್ರಮ, ಸಡಗರ ಮನೆ ಮಾಡಿದೆ. ಆದರೆ ಜಿಲ್ಲಾಡಳಿತ ಡಿ.22ರಂದು ನಡೆಯುವ ದತ್ತಜಯಂತಿ ಕಾರ್ಯಕ್ರಮದ ಭದ್ರತೆ ನೆಪದಲ್ಲಿ ನಗರದಲ್ಲಿ ಅಂಗಡಿ ಮುಂಗಟ್ಟುಗಳ ಬಂದ್‍ಗೆ ಆದೇಶ ನೀಡಿರುವುದು ಸರಿಯಲ್ಲ. ಈ ಬಗ್ಗೆ  ಪರಾಮರ್ಶೆ ನಡೆಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದೇನೆಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ನಡೆಯುವ ದತ್ತಜಯಂತಿ ಹಿನ್ನೆಲೆಯಲ್ಲಿ ತನ್ನ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರನ್ನು ಭೇಟಿ ಮಾಡಿದ್ದು, ಭದ್ರತೆ ನೆಪದಲ್ಲಿ ಜಿಲ್ಲಾಡಳಿತ ನಗರದ ಪ್ರಮುಖ ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಆದೇಶಿಸಿರುವ ಕ್ರಮದ ಬಗ್ಗೆ ನಿಯೋಗ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ದತ್ತಜಯಂತಿ ನಗರದಲ್ಲಿ ಸಂಭ್ರಮದಿಂದ ನಡೆಯಬೇಕು. ಇದರಲ್ಲಿ ಸಾರ್ವಜನಿಕರೂ ಭಾಗಿಯಾಗಬೇಕು. ಆದರೆ ಜಿಲ್ಲಾಡಳಿತದ ಬಂದ್ ಆದೇಶದಿಂದಾಗಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗಲಿದ್ದು, ಜಿಲ್ಲಾಡಳಿತ ಕರೆ ನೀಡಿರುವ ಬಂದ್ ಆದೇಶವನ್ನು ಸಡಿಲಗೊಳಿಸಬೇಕೆಂದರು.

ಈ ಹಿಂದೆ ದತ್ತಜಯಂತಿ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಸಂಘರ್ಷಗಳು ನಡೆದಿಲ್ಲ. ಹೊರಗಿನಿಂದ ಬಂದ ಕೆಲವೇ ಕೆಲ ಕಿಡಿಗಳಿಂದ ಕೆಲ ಸಂದರ್ಭಗಳಲ್ಲಿ ಗಲಭೆಗಳು ನಡೆದಿರಬಹುದು. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಬಂದ್‍ಗೆ ಆದೇಶ ನೀಡಿರುವುದರಿಂದ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿರುವ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಹೊರ ಜಿಲ್ಲೆಗಳಿಗೆ ಜಿಲ್ಲೆಯ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ನೀಡಿರುವ ಬಂದ್ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಲಾಗಿದೆ ಎಂದರು. 

ದತ್ತಜಯಂತಿ ಹಿನ್ನೆಲೆಯಲ್ಲಿ ಶನಿವಾರ ದತ್ತಪೀಠದ ಆವರಣದಲ್ಲಿ ಭಕ್ತರಿಗೆ ಒದಗಿಸಲಾಗಿರುವ ಮೂಲಸೌಕರ್ಯಗಳ ಬಗ್ಗೆ ಚರ್ಚಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ ಶನಿವಾರ ಭಕ್ತರಿಗೆ ವಿತರಿಸುವ ಪ್ರಸಾದ, ಕುಡಿಯುವ ನೀರಿನ ಪೂರೈಕೆ ವೇಳೆ ಪರಿಸ್ಥಿತಿಯ ದುರ್ಲಾಭವಾಗಬಾರದೆಂಬ ಸಲಹೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು ಎಂದ ಅವರು, ಶನಿವಾರದ ಶೋಭಾಯಾತ್ರೆ ವೇಳೆ ಆಶ್ಲೀಲ ಘೋಷಣೆ, ಪ್ರಚೋಧನಕಾರಿ ಘೋಷಣೆಗಳನ್ನು ಕೂಗಬಾರದೆಂದು ಕಾರ್ಯಕರ್ತರಿಗೆ ತಿಳಿ ಹೇಳಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News