ಅಗತ್ಯ ಸೇವೆಗಳಿಗೆ ಬಂದ್ ಆದೇಶದಲ್ಲಿ ವಿನಾಯಿತಿ: ಚಿಕ್ಕಮಗಳೂರು ಜಿಲ್ಲಾಧಿಕಾರಿ

Update: 2018-12-21 18:29 GMT

ಚಿಕ್ಕಮಗಳೂರು, ಡಿ.21: ಶನಿವಾರ ದತ್ತಪೀಠದಲ್ಲಿ ನಡೆಯಲಿರುವ ದತ್ತಜಯಂತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ನಿರ್ದಿಷ್ಟ ಪ್ರದೇಶಗಳಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಆದೇಶಿಸಿಲಾಗಿದೆ. ಈ ಆದೇಶದಲ್ಲಿ ಆಸ್ಪತ್ರೆ, ಮೆಡಿಕಲ್ ಶಾಪ್ ಸೇರಿದಂತೆ ಅಗತ್ಯ ಸೇವೆಗಳಿಗೆ ವಿನಾಯಿತಿ ಇದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ಆದೇಶ ಪರಾಮರ್ಶಿಸುವಂತೆ ಶಾಸಕ ಸಿ.ಟಿ.ನೇತೃತ್ವದ ನಿಯೋಗ ಮನವಿ ಮಾಡಿದೆ. ಆದರೆ ದತ್ತಜಯಂತಿ ವೇಳೆ ಈ ಹಿಂದೆ ನಡೆದ ಅಹಿತಕರ ಘಟನೆಗಳ ಸಂಬಂಧ ಬಂದ್‍ಗೆ ಆದೇಶ ನೀಡಿರುವುದರ ಬಗ್ಗೆ ಮನವರಿಕೆ ಮಾಡಿದ್ದೇವೆ. ಈ ಹಿಂದೆ ನಡೆದಿರುವ ಕೆಲ ಗಲಭೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾರ್ವಜನಿಕರ ಆಸ್ತಿಪಾಸ್ತಿ ಸಂರಕ್ಷಣೆ ದೃಷ್ಟಿಯಿಂದ ನಗರದಲ್ಲಿ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಆದೇಶ ನೀಡಲಾಗಿದೆ. ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು ಪೂರೈಕೆ ಮತ್ತಿತರ ಅಗತ್ಯ ಸೇವೆಗಳಿಗೆ ಬಂದ್ ಆದೇಶದಲ್ಲಿ ವಿನಾಯಿತಿ ನೀಡಲಾಗಿದೆ ಎಂದರು.

ದತ್ತಜಯಂತಿ ವೇಳೆ ಈ ಹಿಂದೆ ನಡೆದ ಕೆಲ ಗಲಭೆಗಳಲ್ಲಿ ಹೊರ ಜಿಲ್ಲೆಗಳಿಂದ ಬಂದವರಿಂದ ಭಾಗಿಯಾಗಿರುವುದು ಕಂಡು ಬಂದಿದೆ. ಶನಿವಾರದ ಕಾರ್ಯಕ್ರಮದ ವೇಳೆ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹೀಗೆ ಬಂದವರು ಗಲಭೆಗಳಿಗೆ ಕಾರಣರಾಗಬಹುದು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸುವ ಸದುದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ. ನಗರ ಹೊರತು ಪಡಿಸಿ ಜಿಲ್ಲೆಯ ಇತರ ಕಡೆಗಳಲ್ಲಿ ಬಂದ್‍ಗೆ ಆದೇಶ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News