ನಕಲಿ ಎನ್‌ಕೌಂಟರ್‌ಗೆ ಬಲಿಯಾದ ನ್ಯಾಯ ವ್ಯವಸ್ಥೆ

Update: 2018-12-22 04:39 GMT

ನಿರೀಕ್ಷೆಯಂತೆ ಸೊಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್ ಪ್ರಕರಣದ ಎಲ್ಲ 22 ಆರೋಪಿಗಳ ಖುಲಾಸೆಯಾಗಿದ್ದಾರೆ. ಒಂದು ರೀತಿಯಲ್ಲಿ, ಕೊಲೆಗಡುಕರೇ ಕೊಲೆ ಪ್ರಕರಣಗಳನ್ನು ವಿಚಾರಣೆ ನಡೆಸಿ ಅವರೇ ತಮ್ಮನ್ನು ತಾವು ‘ದೋಷಮುಕ್ತರು’ ಎಂದು ಘೋಷಿಸಿದಂತಿದೆ. ನ್ಯಾಯಾಲಯ, ಸಿಬಿಐ ಸೇರಿದಂತೆ ಬಹುತೇಕ ತನಿಖಾ ಸಂಸ್ಥೆಗಳು ಆರೋಪಿಗಳ ಕೈಯಲ್ಲೇ ಇರುವಾಗ ಅಥವಾ ಈ ದೇಶದ ಚುಕ್ಕಾಣಿ ಹಿಡಿದವರ ಹೆಸರುಗಳೇ ಈ ಕೊಲೆ ಪ್ರಕರಣದಲ್ಲಿ ಕೇಳಿ ಬರುತ್ತಿರುವಾಗ ಆರೋಪಿಗಳಿಗೆ ಶಿಕ್ಷೆಯಾಗುವುದು ಸಾಧ್ಯವೇ? ಸೊಹ್ರಾಬುದ್ದೀನ್ ಕೊಲೆ ಪ್ರಕರಣದಲ್ಲಿ ಮುಂಚೂಣಿಯಲ್ಲಿದ್ದ ಹೆಸರೇ ಅಮಿತ್ ಶಾ. ನಕಲಿ ಎನ್‌ಕೌಂಟರ್ ಸಾಬೀತಾದರೆ ಅದರಲ್ಲಿ ಶಾಮೀಲಾಗಿರುವ ಅಧಿಕಾರಿಗಳಷ್ಟೇ ಜೈಲು ಸೇರುವುದಲ್ಲ. ಆ ಅಧಿಕಾರಿಗಳ ಕೈಯಲ್ಲಿ ಎನ್‌ಕೌಂಟರ್ ಮಾಡಿಸಿದ ನೇತಾರನೂ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ಈ ಪ್ರಕರಣದಲ್ಲಿ ಶಾಮೀಲಾಗಿದ್ದ ಪ್ರಮುಖ ಆರೋಪಿಯೊಬ್ಬ ಮಾಧ್ಯಮದಲ್ಲಿ ಇದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದ ‘‘ನಾನೇನಾದರೂ ಈ ಪ್ರಕರಣದಲ್ಲಿ ಸಿಲುಕಿಕೊಂಡರೆ ನನ್ನ ಜೊತೆಗೆ ಇನ್ನಷ್ಟು ಜನರು ಜೈಲು ಸೇರಬೇಕಾಗುತ್ತದೆ’’.

ಈ ಹೇಳಿಕೆ ಪರೋಕ್ಷವಾಗಿ ದಿಲ್ಲಿಯಲ್ಲಿರುವ ನಾಯಕರಿಗೆ ನೀಡಿದ ಬೆದರಿಕೆಯಾಗಿತ್ತು. ಇದೀಗ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾಗಿರುವ ಸಣ್ಣ ಪುಟ್ಟ ಕಾಲಾಳುಗಳಿಗೂ ಕ್ಲೀನ್ ಚಿಟ್ ದೊರಕಿದೆ. ಇದರಿಂದ ನಿಟ್ಟುಸಿರು ಬಿಡುವಂತಾಗಿದ್ದು ದಿಲ್ಲಿಯಲ್ಲಿರುವ ನಾಯಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯ ಸಿಗುವುದಿಲ್ಲ ಎನ್ನುವ ವಾಸ್ತವವನ್ನು ಇದರ ತನಿಖಾಧಿಕಾರಿಯೇ ಕೆಲವು ತಿಂಗಳ ಹಿಂದೆ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದರು. ಅಷ್ಟೇ ಅಲ್ಲ, ಸೊಹ್ರಾಬುದ್ದೀನ್ ಎನ್‌ಕೌಂಟರ್ ನಕಲಿ ಮತ್ತು ಇದರ ಹಿಂದೆ ಯಾರ ಕೈಗಳಿವೆ ಎನ್ನುವುದನ್ನು ಬಹಿರಂಗಪಡಿಸಿದ ತನಿಖಾಧಿಕಾರಿಯನ್ನು ಮಟ್ಟ ಹಾಕಲು ಸರಕಾರವೇ ಸಾಕಷ್ಟು ಪ್ರಯತ್ನಿಸಿತು. ಹದಿಮೂರು ವರ್ಷಗಳ ಹಿಂದೆ, ವಸಂತ್ ಲಾಲ್ ಜಿ ಭಾಯ್ ಸೋಲಂಕಿ ಎಂಬ ಗುಜರಾತ್‌ನ ನಿಷ್ಠಾವಂತ ಪೊಲೀಸ್ ಅಧಿಕಾರಿಯ ಪ್ರಾಮಾಣಿಕ ತನಿಖೆಯಿಂದ ಸೊಹ್ರಾಬುದ್ದೀನ್ ಶೇಕ್, ಆತನ ಪತ್ನಿ ಕೌಸರ್‌ಬಿ ಮತ್ತು ಸಹಚರ ತುಳಸಿ ಪ್ರಜಾಪತಿಯ ಎನ್ಕೌಂಟರ್ ಬೆಳಕಿಗೆ ಬಂತು.

ಸುದೀರ್ಘ ವಿಚಾರಣೆ ಬಳಿಕ, ಸೋಲಂಕಿ ಈ ಎನ್‌ಕೌಂಟರ್‌ಗಳು ನಕಲಿ ಎಂಬ ನಿರ್ಭೀತ ವರದಿ ನೀಡಿದರು ಹಾಗೂ ಈ ಕಾನೂನುಬಾಹಿರ ಹತ್ಯೆಗಳಿಗೆ ಕಾರಣರಾದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೆಸರಿಸಿದರು. ಈ ಹತ್ಯೆ ಪ್ರಕರಣದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸೋಲಂಕಿ ಹೇಳಿದ್ದಲ್ಲದೇ, ಪ್ರಸಕ್ತ ಬಿಜೆಪಿ ಅಧ್ಯಕ್ಷರಾಗಿರುವ ಅಮಿತ್ ಶಾ ಈ ಸಂಚಿನಲ್ಲಿ ಶಾಮೀಲಾಗಿದ್ದು, ಅವರು ಕೂಡಾ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಸೋಲಂಕಿ ಅಂದು ಆರೋಪಿಸಿದ್ದರು. ಈ ಹತ್ಯೆ ಪ್ರಕರಣದ ವಿಚಾರಣೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಕೈಗೆತ್ತಿಕೊಂಡ ಬಳಿಕ, ಇಡೀ ಪ್ರಯತ್ನ ನಿಷ್ಪ್ರಯೋಜಕವಾಯಿತು. ವಿಪರ್ಯಾಸವೆಂದರೆ ಸೋಲಂಕಿಗೆ ಇರುವ ಭದ್ರತೆಯನ್ನು ಕೂಡ ಸರಕಾರ ಹಿಂದೆಗೆದುಕೊಂಡಿತು. ಇದರಿಂದಾಗಿ ಅವರಿಗೆ ನ್ಯಾಯಾಲಯಕ್ಕೆ ಭೇಟಿ ನೀಡುವ ಅವಕಾಶ ಸಿಗಲಿಲ್ಲ. ‘‘ಒಬ್ಬ ಹಾಲಿ ನ್ಯಾಯಾಧೀಶ ಹಠಾತ್ತನೆ ಸಾಯುತ್ತಾರೆ ಎಂದಾದರೆ, ನಾನೊಬ್ಬ ನಿವೃತ್ತ ಪೊಲೀಸ್ ಇನ್‌ಸ್ಪೆಕ್ಟರ್ ಮಾತ್ರ. ಸರಕಾರ ಹಾಗೂ ಪೊಲೀಸರು ಈ ಪ್ರಕರಣದ ಆರೋಪಿಗಳಿಗೆ ಕ್ಲೀನ್ ಚಿಟ್ ಪಡೆಯಲು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಅವರು ಸಾಯಿಸಲೂಬಹುದು’’ ಎಂಬ ಹೇಳಿಕೆಯನ್ನು ಅವರು ಮಾಧ್ಯಮಗಳಿಗೆ ನೀಡಿದರು.

ನಾಗ್ಪುರದಲ್ಲಿ 2014ರ ಡಿಸೆಂಬರ್ 1ರಂದು ಸಿಬಿಐ ನ್ಯಾಯಾಧೀಶ ಬ್ರಿಜ್‌ಗೋಪಾಲ್ ಹರಿಕಿಷನ್ ಲೋಯಾ ದಿಢೀರನೇ ಸಾಯುವ ಕೆಲವೇ ದಿನಗಳಿಗೆ ಮುನ್ನ ಅವರ ಭದ್ರತೆಯನ್ನು ಹಿಂಪಡೆದಿರುವುದನ್ನು ಸೋಲಂಕಿ ನೆನೆದಿದ್ದರು. ಸೊಹ್ರಾಬುದ್ದೀನ್ ಎನ್‌ಕೌಂಟರ್ ಕೆಲವು ಕಾರಣಗಳಿಗೆ ಮುಖ್ಯವಾಗುತ್ತದೆ. ಸೊಹ್ರಾಬುದ್ದೀನ್ ಒಬ್ಬ ಕ್ರಿಮಿನಲ್ ಎನ್ನುವ ಕಾರಣಕ್ಕಾಗಿ ಈ ನಕಲಿ ಎನ್‌ಕೌಂಟರ್ ನಡೆದಿರುವುದಲ್ಲ. ಆತ ಗುಜರಾತ್‌ನ ಒಬ್ಬ ಹಿರಿಯ ನಾಯಕನ ಹತ್ಯೆಯ ಸಾಕ್ಷಿಯಾಗಿದ್ದ ಎನ್ನುವ ಕಾರಣಕ್ಕಾಗಿ ಆತನನ್ನು ಮತ್ತು ಆತನ ಸಹಚರರನ್ನು ಕೊಂದು ಹಾಕಲಾಯಿತು ಎನ್ನುವುದನ್ನು ಈಗಾಗಲೇ ಮಾಧ್ಯಮಗಳು ವರದಿ ಮಾಡಿವೆ. ಗುಜರಾತ್ ಹಿರಿಯ ಬಿಜೆಪಿ ನಾಯಕ ಹರೇನ್ ಪಾಂಡ್ಯನ ಹತ್ಯೆಯ ಕುರಿತ ಮಾಹಿತಿ ಸೊಹ್ರಾಬುದ್ದೀನ್‌ಗಿತ್ತು. ಪಾಂಡ್ಯನನ್ನು ಕೊಂದು ಹಾಕಲು ಸೊಹ್ರಾಬುದ್ದೀನ್‌ಗೆ ‘ಮೇಲಿನಿಂದ ಆದೇಶ ಬಂದಿದೆ’ ಎನ್ನುವುದನ್ನು ತನ್ನ ಸಹಚರನೊಂದಿಗೆ ಹಂಚಿಕೊಂಡಿರುವುದು ಆನಂತರ ಬೆಳಕಿಗೆ ಬಂತು. ಇಲ್ಲಿ ಹರೇನ್ ಪಾಂಡ್ಯರನ್ನು ಯಾಕೆ ಕೊಲ್ಲಲಾಯಿತು ಎನ್ನುವುದು ಇನ್ನೊಂದು ಮಹಾ ಹತ್ಯಾಕಾಂಡದ ಜೊತೆಗೆ ತಳಕು ಹಾಕಿಕೊಂಡಿದೆ. ಬಿಜೆಪಿಯಿಂದ ಬಂಡಾಯವೆದ್ದಿದ್ದ ಹರೇನ್ ಪಾಂಡ್ಯ ಅವರು, ಗುಜರಾತ್ ಹತ್ಯಾಕಾಂಡದ ಹಿಂದೆ ಸರಕಾರದ ಪಾತ್ರವಿದ್ದುದನ್ನು ಬಹಿರಂಗಪಡಿಸಿದ್ದರು.

ಹತ್ಯಾಕಾಂಡದ ಕುರಿತಂತೆ ಅವರಲ್ಲಿ ಮಹತ್ವದ ಮಾಹಿತಿಗಳಿದ್ದವು. ಎಲ್ಲಿ ಅವರು ಇದನ್ನು ಬಹಿರಂಗಪಡಿಸುತ್ತಾರೋ ಎನ್ನುವ ಆತಂಕದಿಂದ ಈ ಹತ್ಯೆಯನ್ನು ಮಾಡಲಾಗಿದೆ ಎಂದು ತನಿಖಾ ವರದಿಗಳು ಹೇಳುತ್ತವೆ. ಗುಜರಾತ್ ಹತ್ಯಾಕಾಂಡ ನಡೆದಾಗ ಗುಜರಾತ್‌ನ ಮುಖ್ಯಮಂತ್ರಿ ಯಾರಾಗಿದ್ದರು, ಗೃಹಸಚಿವ ಸ್ಥಾನವನ್ನು ಯಾರು ವಹಿಸಿಕೊಂಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ನ ಆರೋಪಿಗಳಿಗೆ ಶಿಕ್ಷೆಯಾದರೆ, ಹರೇನ್ ಪಾಂಡ್ಯ ಹತ್ಯೆ ಮಾಡಿದ ಆರೋಪಿಗಳೂ ಜೈಲು ಸೇರಬೇಕಾಗುತ್ತದೆ. ಅದರ ಜೊತೆಗೆ ಗುಜರಾತ್ ಹತ್ಯಾಕಾಂಡದ ಸಂಚು ಕೂಡ ಬಯಲಾಗುತ್ತದೆ. ಹಾಗೇನಾದರೂ ಆದರೆ ಅದು ಪ್ರಧಾನಿ ಮೋದಿ ಮತ್ತು ಅವರ ಆತ್ಮೀಯ ಅಮಿತ್ ಶಾ ಅವರ ಬುಡಕ್ಕೇ ಬರುತ್ತದೆ. ಪ್ರಕರಣ ಇಷ್ಟೊಂದು ಆಳವಿರುವಾಗ ಸೊಹ್ರಾಬುದ್ದೀನ್ ಮತ್ತು ಆತನ ಕುಟುಂಬಕ್ಕೆ ನ್ಯಾಯ ಸಿಗುವುದನ್ನು ಕನಸಲ್ಲಾದರೂ ಊಹಿಸಲು ಸಾಧ್ಯವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News