ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

Update: 2018-12-22 17:25 GMT

ದಾವಣಗೆರೆ,ಡಿ.22: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರೂ ಸೇರಿದಂತೆ ನಾಲ್ವರು ಆರೋಪಿಗಳನ್ನು ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಬಂಧಿಸಿ, 15 ಸಾವಿರ ರೂ. ಮೌಲ್ಯದ 2 ಕೆಜಿ 50 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. 

ಹಾವೇರಿ ಜಿಲ್ಲೆ ಹಿರೇಕೆರೂರು ತಾ. ಬುಳ್ಳಾಪುರದ ಶಿವಪ್ಪ(70), ದಾವಣಗೆರೆ ಮುದ್ದಾ ಭೋವಿ ಕಾಲನಿಯ ಸೈಯದ್ ಚಾಂದ್ ಪೀರ್(27), ಎಸ್ಸೆಸ್ಸೆಂ ನಗರದ ಯಾಸೀನ್ ಬೀ(62) ಹಾಗೂ ಆಜಾದ್ ನಗರದ ಮೆಹಬೂಬ್ ಬೀ ಅಲಿಯಾಸ್ ಚೋಟಿ ಬಂಧಿತ ಆರೋಪಿಗಳು. 

ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಈ ನಾಲ್ವರು ಆರೋಪಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಆದರಿಸಿ ಆಝಾದ್ ನಗರ ಠಾಣೆ ವ್ಯಾಪ್ತಿಯ ಮಾಗಾನಹಳ್ಳಿ ರಸ್ತೆಯ ಶಿಂಗ್ರಿಹಳ್ಳಿ ರೈಸ್ ಮಿಲ್ ಕಾಂಪೌಂಡ್ ಬಳಿ ದಾಳಿ ಮಾಡಿ, 2 ಕೆಜಿ 50 ಗ್ರಾಂ ಗಾಂಜಾ ಸೊಪ್ಪಿನ ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ. 

ಬಂಧಿತ ಆರೋಪಿಗಳ ಪೈಕಿ ಚಾಂದ್ ಪೀರ್ ಹಾಗೂ ಯಾಸೀನ್ ಬೀ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಗಾಂಜಾ ಮಾರಾಟ ಪ್ರಕರಣಗಳು ದಾಖಲಾಗಿವೆ. ಎಸ್ಪಿ ಆರ್.ಚೇತನ್, ಎಎಸ್ಪಿ ಟಿ.ಜೆ.ಉದೇಶ್ ಮಾರ್ಗದರ್ಶನದಲ್ಲಿ ಡಿಸಿಬಿ ಇನಸಪೆಕ್ಟರ್ ಟಿ.ವಿ.ದೇವರಾಜ, ಸಿಬ್ಬಂದಿ ಪ್ರಕಾಶ, ರವಿ, ಮಂಜುನಾಥ, ಲೋಹಿತ, ರಮೇಶ, ನಾಗರಾಜ, ದೇವರಾಜರನ್ನು ಒಳಗೊಂಡ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News