×
Ad

ರೋಗಗ್ರಸ್ತ ಕಾರ್ಖಾನೆ ಪಟ್ಟಿಯಿಂದ ವಿಐಎಸ್‍ಎಲ್ ಕಾರ್ಖಾನೆ ಹೊರಗಿಡಲು ಕೇಂದ್ರ ಸರ್ಕಾರ ನಿರ್ಧಾರ: ಬಿ.ವೈ.ರಾಘವೇಂದ್ರ

Update: 2018-12-23 17:33 IST

ಶಿವಮೊಗ್ಗ, ಡಿ. 23: ನಷ್ಟದ ಹಾದಿಯಿಂದ ಖಾಸಗೀಕರಣದತ್ತ ಸಾಗಿರುವ ಸರ್ಕಾರಿ ಸ್ವಾಮ್ಯದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ - ಉಕ್ಕು ಕಾರ್ಖಾನೆ (ವಿ.ಐ.ಎಸ್.ಎಲ್) ಯನ್ನು ರೋಗಗ್ರಸ್ತ ಸಾರ್ವಜನಿಕ ಉದ್ಯಮಗಳ ಪಟ್ಟಿಯಿಂದ ಕೈ ಬಿಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 

'ಭದ್ರಾವತಿ ವಿಐಎಸ್‍ಎಲ್ ಸೇರಿದಂತೆ ದೇಶದ 13 ಕಾರ್ಖಾನೆಗಳಿಂದ ಬಂಡವಾಳ ಹಿಂತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಇದರಲ್ಲಿ ವಿಐಎಸ್‍ಎಲ್ ಸೇರಿದಂತೆ ಮೂರು ಕಾರ್ಖಾನೆಗಳನ್ನು ಬಂಡವಾಳ ಹಿಂತೆಗೆತ ಪಟ್ಟಿಯಿಂದ ಹೊರಗಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಿಷಯವನ್ನು ಸ್ವತಃ ಕೇಂದ್ರ ಉಕ್ಕು ಸಚಿವರೂ ಆದ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಚೌಧರಿ ಬೀರೇಂದ್ರ ಸಿಂಗ್‍ರವರು ತಿಳಿಸಿದ್ದಾರೆ' ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. 

ರವಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 'ತಾವು ಇತ್ತೀಚೆಗೆ ಲೋಕಸಭೆಯಲ್ಲಿ ಸಂಸತ್ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಉಕ್ಕು ಸಚಿವರನ್ನು ಭೇಟಿಯಾಗಿ, ವಿಐಎಸ್‍ಎಲ್ ಕಾರ್ಖಾನೆ ಕುರಿತಂತೆ ಚರ್ಚೆ ನಡೆಸಿದ್ದೆನೆ. ಈ ವೇಳೆ ಉಕ್ಕು ಸಚಿವರು ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ' ಎಂದರು. 

ಬಂಡವಾಳ ಹಿಂತೆಗೆತ ಪಟ್ಟಿಯಿಂದ ವಿಐಎಸ್‍ಎಲ್ ಕಾರ್ಖಾನೆ ಹೊರಗಿಡುವ ಕುರಿತಂತೆ ನೀತಿ ಆಯೋಗದ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ಉಕ್ಕು ಸಚಿವರು ನೀಡಿದ್ದಾರೆ. ಇದರಿಂದ ವಿಐಎಸ್‍ಎಲ್ ಕಾರ್ಖಾನೆಯ ಸುಮಾರು 2500 ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. 

ಈಗಾಗಲೇ ಕಾರ್ಖಾನೆಯಲ್ಲಿ ಫೋರ್ಜಿನ್ ಎಂಜಿನ್ ಕೂರಿಸಲಾಗಿದ್ದು, ನಾಳೆಯಿಂದ ಈ ಎಂಜಿನ್‍ಗಳು ಕಾರ್ಯಾರಂಭ ಮಾಡಲಿವೆ. ಈಗಾಗಲೇ ಸುಮಾರು 8 ರಿಂದ 10 ಕೋಟಿ ರೂ. ಬಂಡವಾಳವನ್ನು ಕಾರ್ಖಾನೆಗೆ ವ್ಯಯಿಸಲಾಗಿದೆ. ಕಾರ್ಖಾನೆಯ ಶ್ರೇಯೋಭಿವೃದ್ದಿಗೆ ಕೇಂದ್ರದಿಂದ ಎಲ್ಲ ರೀತಿಯ ಅಗತ್ಯ ನೆರವು ಕಲ್ಪಿಸಿಕೊಡುವ ನಿಟ್ಟಿನಲ್ಲಿ ತಾವು ಪ್ರಮಾಣಿಕ ಗಮನಹರಿಸುತ್ತೆನೆ ಎಂದು ಹೇಳಿದ್ದಾರೆ. 

ಸ್ಪಷ್ಟೀಕರಣ ನೀಡಿಲ್ಲ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ವಿಐಎಸ್‍ಎಲ್ ಕಾರ್ಖಾನೆಗೆ ರಾಜ್ಯ ಸರ್ಕಾರ ಮಂಜೂರು ಮಾಡಿರುವ 150 ಎಕರೆ ಗಣಿ ಪ್ರದೇಶದ ಕುರಿತಂತೆ ಏನಾದರೂ ಕಾನೂನು ತೊಡಕುಗಳಿವೆಯಾ? ಎಂಬ ಸ್ಪಷ್ಟೀಕರಣ ಪತ್ರವನ್ನು  ಕಳೆದ ಸೆಪ್ಟೆಂಬರ್ ತಿಂಗಳಲ್ಲಿಯೇ ಕೇಂದ್ರ ಗಣಿ ಸಚಿವ ನರೇಂದ್ರ ಸಿಂಗ್ ತೋಮರ್‍ರವರ ಕಚೇರಿಯಿಂದ ರಾಜ್ಯ ಸರ್ಕಾರಕ್ಕೆ ರವಾನೆಯಾಗಿದೆ. ಆದರೆ ಇಲ್ಲಿಯವರೆಗೂ ಈ ಪತ್ರಕ್ಕೆ ರಾಜ್ಯ ಸರ್ಕಾರ ಯಾವುದೇ ಸ್ಪಷ್ಟೀಕರಣ ನೀಡಿಲ್ಲ ಎಂದರು. 

ಕ್ರಮ: ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪುನಾರಾರಂಭ, ಜಿಲ್ಲೆಯ ವಿವಿಧೆಡೆ ಬಿಎಸ್‍ಎನ್‍ಎಲ್‍ನ 40 ಮೊಬೈಲ್ ಟವರ್ ಅಳವಡಿಕೆ, ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ, ಶಿವಮೊಗ್ಗದಲ್ಲಿ ಇ.ಎಸ್.ಐ. ಆಸ್ಪತ್ರೆ ಸ್ಥಾಪನೆ, ಸಾಗರದ ಹೊಳೆಬಾಗಿಲು ಸೇತುವೆ ನಿರ್ಮಾಣ ಮತ್ತೀತರ ಅಭಿವೃದ್ದಿ ಕಾರ್ಯಗಳ ಕುರಿತಂತೆ ದೆಹಲಿಯಲ್ಲಿ ಸಂಬಂಧಿಸಿದ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೆನೆ ಎಂದು ಇದೇ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News