​ಸಾಗರ-ಸೊರಬ ಭಾಗದಲ್ಲಿ ಅಡಕೆ ಕಳ್ಳತನ ಪ್ರಕರಣ : ಮೂವರ ಬಂಧನ

Update: 2018-12-23 12:18 GMT

ಶಿವಮೊಗ್ಗ, ಡಿ. 23: ಸೊರಬ ಹಾಗೂ ಸಾಗರ ತಾಲೂಕು ಭಾಗಗಳಲ್ಲಿ ಅಡಕೆ ಕಳ್ಳತನ ಮಾಡುತ್ತಿದ್ದ ಆರೋಪದ ಮೇರೆಗೆ, ಸೊರಬ ಠಾಣೆ ಪೊಲೀಸರು ಮೂವರನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಅಡಕೆ ವಶಕ್ಕೆ ಪಡೆದಿರುವ ಘಟನೆ ನಡೆದಿದೆ. 

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾಳದಘಟ್ಟ ಗ್ರಾಮದ ನಿವಾಸಿ ಪವನ್ (20) ಹಾಗೂ ಕೊಂಡ್ಲಿ ಗ್ರಾಮದ ಮುಕುಂದ (27) ಹಾಗೂ ಅಣಜಿ ಗ್ರಾಮದ ಗಣೇಶ್ (20) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. 

ಇವರು ಇತ್ತೀಚೆಗೆ ರಾತ್ರಿ ಸಮಯದಲ್ಲಿ ಸೊರಬ ತಾಲೂಕಿನ ಮುಟುಗುಪ್ಪೆ ಹಾಗೂ ಎಸ್. ದೊಡ್ಡೇರಿ ಗ್ರಾಮಗಳ ಬಳಿ ಮಾರುತಿ ಓಮ್ನಿ ಕಾರಿನಲ್ಲಿ ಆಗಮಿಸಿ, ಅಡಕೆ ಕಳ್ಳತನಕ್ಕೆ ಸಂಚು ನಡೆಸಿದ್ದರು. ಇವರ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು, ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು. 

ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಸಾಗರ ಹಾಗೂ ಸೊರಬ ತಾಲೂಕಿನ ವಿವಿಧೆಡೆ ಅಡಕೆ ಕಳ್ಳತನ ಮಾಡಿದ್ದ ಸಂಗತಿ ಬಾಯ್ಬಿಟ್ಟಿದ್ದಾರೆ. ಬಂಧಿತರಿಂದ 1.80 ಲಕ್ಷ ರೂ. ಮೌಲ್ಯದ 15 ಕ್ವಿಂಟಾಲ್ ತೂಕದ 43 ಚೀಲ ಸಿಪ್ಪೆಗೋಟು ಅಡಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News