​ಡಿ.26 ರಿಂದ ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರ

Update: 2018-12-23 17:26 GMT

ಬೆಂಗಳೂರು, ಡಿ.23: ಬೆಂಗಳೂರು-ರಾಮನಗರ-ಮೈಸೂರು ನಡುವಿನ ಮೆಮು ರೈಲು ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದ್ದು, ಡಿ.26 ರಿಂದ ವಾರದ ಎಲ್ಲಾ ದಿನಗಳ ಕಾಲ ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ವಿಶೇಷ ವಿದ್ಯುತ್ ರೈಲು (ಮೆಮು) ಸಂಚಾರಕ್ಕಿಂದು ಚಾಲನೆ ನೀಡಿದ್ದು, ಡಿ.26 ರಿಂದ ಬೆಂಗಳೂರು ಹಾಗೂ ಡಿ.27 ರಿಂದ ಮೈಸೂರಿನಿಂದ ರೈಲುಗಳು ಸಂಚಾರ ನಡೆಸಲಿವೆ.

ಬೆಂಗಳೂರು-ಮೈಸೂರು ನಡುವೆ ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ರೈಲು ಸಂಚಾರ ನಡೆಸಲಿದೆ. ಮೈಸೂರು-ಬೆಂಗಳೂರು ನಡುವೆ ಗುರುವಾರ, ಶುಕ್ರವಾರ, ಶನಿವಾರ ಹಾಗೂ ರವಿವಾರ ಮೆಮು ರೈಲು ಸಂಚರಿಸಲಿದೆ.ರವಿವಾರ, ಸೋಮವಾರ ಮತ್ತು ಮಂಗಳವಾರ ರಾತ್ರಿ 8.30ಕ್ಕೆ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಬೆಂಗಳೂರು-ಕಾರವಾರ ರೈಲು ಮೈಸೂರಿಗೆ ಸಂಪರ್ಕ ಕಲ್ಪಿಸಲಿದೆ. ಬೆಂಗಳೂರಿನಿಂದ ರಾತ್ರಿ 7.55 ಮೆಮು ರೈಲು ಹೊರಡಲಿದ್ದು, ರಾತ್ರಿ 10.50ಕ್ಕೆ ಮೈಸೂರು ತಲುಪಲಿದೆ. ಬೆಳಗ್ಗೆ 4.45ಕ್ಕೆ ಮೈಸೂರಿನಿಂದ ಹೊರಡುವ ರೈಲು 8.30ಕ್ಕೆ ಬೆಂಗಳೂರನ್ನು ತಲುಪಲಿದೆ.

ನಿಲುಗಡೆ ಎಲ್ಲೆಲ್ಲಿ: ಬೆಂಗಳೂರು ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡುವ ರೈಲು. ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನಭಾರತಿ ಹಾಲ್ಟ್, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೋಹಳ್ಳಿ ಹಾಲ್ಟ್, ರಾಮಮನಗರ, ಚನ್ನಪಟ್ಟಣ, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಮೈಸೂರು ಸೇರಲಿದೆ.

ಮೈಸೂರಿನಿಂದ ಹೊರಡುವ ರೈಲು ಈ ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.ಮೆಮು ರೈಲು ಈಗಾಗಲೇ ಬೆಂಗಳೂರಿನಿಂದ ರಾಮನಗರದ ತನಕ ಸಂಚಾರ ನಡೆಸುತ್ತಿತ್ತು. ಈಗ ಅದನ್ನು ಮೈಸೂರಿನ ತನಕ ವಿಸ್ತರಣೆ ಮಾಡಲಾಗಿದೆ. ಬೆಂಗಳೂರಿನಿಂದ 8 ಗಂಟೆಗೆ ಹೊರಟು ರೈಲು ರಾಮನಗರ ತಲುಪುತ್ತಿತ್ತು. ಮೈಸೂರಿನ ತನಕ ವಿಸ್ತರಣೆ ಆದ ರೈಲಿನಲ್ಲಿ 12 ಬೋಗಿಗಳಿವೆ. 3,500 ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ರೈಲಿಗೆ ಮನವಿ: ಕ್ರಿಸ್‌ಮಸ್, ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಬ್ಬಗಳು ಬರುತ್ತಿದ್ದು, ಹೆಚ್ಚಿನ ರೈಲುಗಾಡಿಗಳನ್ನು ಬಿಡುವಂತೆ ನೈರುತ್ಯ ರೈಲ್ವೇ ವಲಯ ಪ್ರಯಾಣಿಕರ ಸಂಘವು ಮನವಿ ಮಾಡಿದೆ. ನೈರುತ್ಯ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಸಂಘವು ಪತ್ರ ಬರೆದಿದೆ. ಹಬ್ಬಕ್ಕಾಗಿ ಹುಬ್ಬಳ್ಳಿ ಹಾಗೂ ಮೈಸೂರಿಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಾಗಿದ್ದು, ಹಾಲಿ ಸಂಚರಿಸುತ್ತಿರುವ ರೈಲು ಗಾಡಿಗಳಲ್ಲಿ ಹೆಚ್ಚು ಜನಸಂಖ್ಯೆಯಿದೆ. ಹೀಗಾಗಿ, ರೈಲುಗಾಡಿಗಳನ್ನು ಓಡಿಸಬೇಕು ಎಂದು ಸಂಘ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News