​ಬಾಗಲಕೋಟೆ-ವಿಜಯಪುರ ಜಿಲ್ಲೆಗಳನ್ನು ಇಸ್ರೇಲ್ ಮಾದರಿ ಕೃಷಿಗೆ ಸೇರಿಸಲು ಒತ್ತಾಯ: ಶಿವಾನಂದ ಪಾಟೀಲ್

Update: 2018-12-23 17:28 GMT

ಬಾಗಲಕೋಟೆ, ಡಿ.23: ತೋಟಗಾರಿಕೆಯಲ್ಲಿ ಬಾಗಲಕೋಟೆ, ವಿಜಯಪುರ ಜಿಲ್ಲೆ ಅಪಾರ ಸಾಧನೆ ಮಾಡಿದ್ದು, ಈ ಎರಡು ಜಿಲ್ಲೆಗಳನ್ನು ಇಸ್ರೇಲ್ ಮಾದರಿ ಕೃಷಿಗೆ ಸೇರಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ರವಿವಾರ ಬಾಗಲಕೋಟೆ ನಗರದಲ್ಲಿ ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರದ ದ್ರಾಕ್ಷಿ, ಬಾಗಲಕೋಟೆಯ ದಾಳಿಂಬೆ ವಿದೇಶಗಳಿಗೆ ರಫ್ತು ಆಗುತ್ತಿದ್ದು, ಇಂತಹ ಬೆಳೆಗಳನ್ನು ಬೆಳೆಯಲು ಹಾಗೂ ತೋಟಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಇಂತಹ ಮೇಳಗಳ ಅವಶ್ಯಕತೆ ಇದೆ ಎಂದು ಹೇಳಿದರು.

ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕರೆ ರೈತರು ಸರಕಾರಕ್ಕೆ ಸಾಲ ಮನ್ನಾ ಮಾಡಿ ಎಂದಾಗಲಿ, ಬೆಂಬಲ ಬೆಲೆ ನೀಡಿ ಎಂದು ಹೋರಾಟಗಳನ್ನು ಮಾಡಲು ಮುಂದಾಗುವುದಿಲ್ಲ. ಹೀಗಾಗಿ, ರೈತರ ಸಂದಿಗ್ಧ ಪರಿಸ್ಥಿತಿಯನ್ನು ತಪ್ಪಿಸಲು ದೇಶದಲ್ಲಿ ಏಕರೂಪದ ಬೆಲೆ ನಿಗದಿ ಆಗಬೇಕೆಂದು ತಿಳಿಸಿದರು.

ರಾಜ್ಯದ ತೋಟಗಾರಿಕೆ ವಿವಿಗಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಲಾಗುವುದು. ಅಲ್ಲದೆ, ತೋಟಗಾರಿಕೆ ವಿವಿಗೆ ನಿರಂತರ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News