ಹಸಿವಿನ ರಾಜಕಾರಣಕ್ಕಿಂತ ಹಸುವಿನ ರಾಜಕಾರಣ ಅಪಾಯ: ಸಾಹಿತಿ ಬರಗೂರು ರಾಮಚಂದ್ರಪ್ಪ

Update: 2018-12-23 17:56 GMT

ತುಮಕೂರು, ಡಿ.23:ಹಸಿವಿನ ರಾಜಕಾರಣಕ್ಕಿಂತ ಇಂದು ನಡೆಯುತ್ತಿರುವ ಹಸುವಿಗಾಗಿ ನಡೆಯುತ್ತಿರುವ ರಾಜಕಾರಣ ಅತ್ಯಂತ  ಅಪಾಯಕಾರಿ ಎಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ತುಮಕೂರು ನಗರದ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಶಶಾಂಕ ಪ್ರಕಾಶನ ಆಯೋಜಿಸಿದ್ದ ಡಾ. ಓ. ನಾಗರಾಜು ಅವರ ಹಟ್ಟಿ ಅರಳಿ ಹೂವಾಗಿ ಕಾಂದಬರಿಯನ್ನು ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು, ಸಮಾಜದಲ್ಲಿ ಯಾವುದೇ ಸಂಘರ್ಷ ನಡೆಯದೆ, ಉಳಿಗಮಾನ ಪದ್ದತಿಯನ್ನು ಒಪ್ಪಿಕೊಂಡು ಬದುಕಿದರೆ ಅದು ಕೆಲವರ ಪ್ರಕಾರ ಒಳ್ಳೆಯ ಕಾಲ. ಸಂಕಟಗಳಿಂದ ಹೊರಬರಲು ಸಂಘರ್ಷ ನಡೆದರೆ ಅಲ್ಲಿ ಏನೋ ನಡೆಯುತ್ತಿದೆ ಎಂದರ್ಥ. ಹಸಿವಿಗಾಗಿ ರಾಜಕಾರಣ ಮಾಡಿದರೆ ಒಳ್ಳೆಯದು. ಅದು ಆಗದೆ ಹಸುವಿನ ರಾಜಕಾರಣ ನಡೆಯುತ್ತಿದೆ ಎಂದು ತಿಳಿಸಿದರು.

ಚಳವಳಿಗಳು ಸೃಜನಶೀಲತೆಯನ್ನು ನಾಶ ಮಾಡುತ್ತದೆ ಎಂಬ ವಾದವಿದೆ. ಆದರೆ ಇದು ಸುಳ್ಳು. ಸಾಮಾಜಿಕ ಮತ್ತು ಸಾಹಿತ್ಯಕ ಚಳವಳಿಗಳು ನಡೆಯುವುದರಿಂದಲೇ ಒಳ್ಳೆಯ ಕೃತಿಗಳು ಮೂಡಿಬರಲು ಸಾಧ್ಯ. ಅದರ ಭಾಗವೇ ಹಟ್ಟಿ ಅರಳಿ ಹೂವಾಗಿ ಕೃತಿಯಂಥವುಗಳು ಬರಹ ರೂಪ ತಾಳುತ್ತವೆ. ಪಂಪ, ವಚನಕಾರರು, ಕುಮಾರವ್ಯಾಸ ಸಾಹಿತ್ಯ ಕೃತಿಗಳಲ್ಲಿ ಚಳವಳಿಯಿಂದ ಸೃಜನಶೀಲವಾಗಿ ಅಭಿವ್ಯಕ್ತಿಸಿರುವುದನ್ನು ನಾವು ನೋಡಬಹುದು. ಈ ಸನ್ನಿವೇಶಗಳನ್ನು ನೋಡದೇ ಹೋದರೆ ಇಂತಹ ಅಪವ್ಯಾಖ್ಯಾನಗಳು ಮೂಡಿಬರಲು ಸಾಧ್ಯ. ಪಂಪ ರಾಜಪ್ರಭುತ್ವದ ವಿರುದ್ದ ದನಿ ಎತ್ತಿದ. ವಚನಕಾರರು ಭಾಷಾ ಚಳವಳಿಯನ್ನೇ ನಡೆಸುವ ಜೊತೆಗೆ ಧಾರ್ಮಿಕ ಚಳವಳಿಯನ್ನು ಮಾಡಿದರು ಎಂದು ವಿವರಿಸಿದರು.

ದಲಿತ-ಬಂಡಾಯ ಸಾಹಿತ್ಯ ಬಂದ ಮೇಲೆ ಸಾಹಿತಿಗಳು ಬೀದಿಗೆ ಬಂದರು.ಅಲ್ಲಿಯವರೆಗೆ ಊರಿಗೆ ಸಿಮಿತವಾಗಿದ್ದ ಸಾಹಿತ್ಯ  ಹಟ್ಟಿಗಳ ಅನುಭವ ಹೊರಬಂತು.70ರ ದಶಕ ದಲ್ಲಾದ ಚಳವಳಿಯ ಪರಿಣಾಮ ಇಂದು ಊರು ಕೇರಿ, ಹಟ್ಟಿಗಳು ಕೂಡ ಸಾಹಿತ್ಯದ ಒಳಗೆ ಬಂದಿವೆ.ಇತ್ತೀಚಿನ ಬರಹಗಳಲ್ಲಿ ಹೊಸ ಚಹರೆ ಕಂಡುಬರುತ್ತಿದೆ.ಜನಪರ ಚಳವಳಿಗಳ ಪ್ರಭಾವ ಪರಿಣಾಮವೇ ಇಂತಹ ಕೃತಿಗಳ ರಚನೆಗೆ ಕಾರಣ ಎಂದು ತಿಳಿಸಿದರು.

ಹಟ್ಟಿ ಅರಳಿ ಹೂವಾಗಿ ಒಂದು ಆದರ್ಶದ ಕಾದಂಬರಿ.ಇಲ್ಲಿ ಬರುವ ಪಾತ್ರಗಳೆಲ್ಲವೂ ಒಳ್ಳೆಯದನ್ನೇ ಆಶಿಸುತ್ತವೆ. ಕಾದಂಬರಿಕಾರರ ಆಶಯ ಒಳ್ಳೆಯದೆ.ಹಟ್ಟಿಗಳ ಅರಳಿ ಹೂವಾಗುವ ಮತ್ತು ಹಟ್ಟಿಗಳು ನರಳಿ ನೋವಾಗುವ ಬಗೆಯೂ ಇದೆ. ಶಿಕ್ಷಣ ಪಡೆದವರು ಹೊಸ ಆಲೋಚನೆ ಮಾಡತೊಡಗುತ್ತಾರೆ. ಕಾದಂಬರಿಯಲ್ಲಿ ಈ ಬದಲಾವಣೆಯೂ ಕಂಡುಬರುತ್ತದೆ ಎಂದರು.

ಪ್ರಜಾಪ್ರಭುತ್ವದ ನಂತರ ಹಳ್ಳಿಗಳು ಬದಲಾಗಿರುವುದನ್ನು ಹಟ್ಟಿ ಅರಳಿ ಕಾದಂಬರಿಯಲ್ಲಿ ದಾಖಲಾಗಿದೆ. ಇದು ಡಾ.ಒ.ನಾಗರಾಜು ಅವರ ಕನಸಿನ ಕಾದಂಬರಿ. ಸಮಾಜ ಸೌಹಾರ್ದವಾಗಿರಬೇಕು ಎಂಬ ಕಾದಂಬರಿ ಕಾರರ ಕನಸು ನನಸಾದರೆ ಒಳ್ಳೆಯದು ಎಂದು ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಸಮಾಜ ಚಿಂತಕ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕವಿ ಡಾ.ಆರನಕಟ್ಟೆ ರಂಗನಾಥ ಹಟ್ಟಿ ಅರಳಿ ಹೂವಾಗಿ ಕಾದಂಬರಿ ಕುರಿತು ಮಾತನಾಡಿದರು. ಯುವಜನ ಮುಖಂಡ ಬಿ.ರಾಜಶೇಖರಮೂರ್ತಿ, ಕರ್ನಾಟಕ ರಾಜ್ಯ ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ್, ಕಾದಂಬರಿಕಾರ ಡಾ.ಓ.ನಾಗರಾಜು ಉಪಸ್ಥಿತರಿದ್ದರು. 

ಉಪನ್ಯಾಸಕಿ ಶ್ವೇತಾರಾಣಿ ಸ್ವಾಗತಿಸಿದರೆ,ಸಹಾಯಕ ಪ್ರಾಧ್ಯಾಪಕ ಡಾ.ಓ.ನಾಗಭೂಷಣ್ ಬಗ್ಗನಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News