ಶಿವಮೊಗ್ಗ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್ ಬರ್ಬರ ಹತ್ಯೆ
ಶಿವಮೊಗ್ಗ, ಡಿ. 24: ಶಿವಮೊಗ್ಗ ನಗರದ ರೌಡಿ ಶೀಟರ್ ಓರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಗರದ ಹೊರವಲಯ ಹರಿಗೆ ಸಮೀಪದ ಹಾತಿ ನಗರದ ಬಳಿ ನಡೆದಿದೆ.
ಬಂಕ್ ಬಾಲು (35) ಹತ್ಯೆಗೀಡಾದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆ ಕುಳಿತಿದ್ದಾಗ ಏಕಾಏಕಿ ಆಗಮಿಸಿದ ಹಂತಕರು, ಮಾರಕಾಸ್ತ್ರಗಳಿಂದ ಹೊಡೆದು ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡ ಬಾಲು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಖ್ಯಾತ ರೌಡಿ: ಕೊಲೆಗೀಡಾದ ಬಂಕ್ ಬಾಲು ಮೂಲತಃ ಬೆಂಗಳೂರಿನವನು. ಈತನ ಸಂಬಂಧಿಗಳು ಶಿವಮೊಗ್ಗದಲ್ಲಿದ್ದು, ಇಲ್ಲಿಯೇ ಕೆಲ ವರ್ಷಗಳ ಕಾಲ ನೆಲೆಸಿದ್ದ. ಪೆಟ್ರೋಲ್ ಬಂಕ್‍ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣದಿಂದ, ಈತನಿಗೆ 'ಬಂಕ್' ಎಂಬ ಅಡ್ಡ ಹೆಸರಿತ್ತು ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳುತ್ತವೆ.
ಈತ ಕೊಲೆ, ಬೆದರಿಕೆ, ಕೊಲೆ ಯತ್ನ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ದ ಪ್ರಕರಣ ದಾಖಲಾಗಿತ್ತು. ಮತ್ತೋರ್ವ ಕುಖ್ಯಾತ ರೌಡಿ ಮಾರ್ಕೆಟ್ ಲೋಕಿ ಜೊತೆ ಗುರುತಿಸಿಕೊಂಡಿದ್ದ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಈತನನ್ನು ಪ್ರಕರಣವೊಂದರಲ್ಲಿ ಕೋಕಾ ಕಾಯ್ದೆಯಡಿ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಹೊರಬಂದು, ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳುತ್ತವೆ.
ಎದುರಾಳಿ ರೌಡಿ ತಂಡ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಈತನ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪಿಗಳ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದು, ಶೀಘ್ರ ಬಂಧನವಾಗುವ ಸಾಧ್ಯತೆಯಿದೆ.
ವಿಶೇಷ ತಂಡಗಳ ರಚನೆ: ಡಿವೈಎಸ್‍ಪಿ ಸುದರ್ಶನ್
ರೌಡಿ ಶೀಟರ್ ಬಂಕ್ ಬಾಲು ಹತ್ಯೆಗೆ ಸಂಬಂಧಿಸಿದಂತೆ ಮೂರು ವಿಶೇಷ ಪೊಲೀಸ್ ತಂಡಗಳ ರಚನೆ ಮಾಡಲಾಗಿದೆ. ಈಗಾಗಲೇ ಆರೋಪಿಗಳ ಸುಳಿವು ಪತ್ತೆ ಹಚ್ಚಲಾಗಿದ್ದು, ಶೀಘ್ರವಾಗಿಯೇ ಆರೋಪಿಗಳನ್ನು ಸೆರೆ ಹಿಡಿಯಲಾಗುವುದು. ಬಂಕ್ ಬಾಲು ಈ ಹಿಂದೆ ಕೊಲೆ, ಬೆದರಿಕೆ, ಹಲ್ಲೆ ಮತ್ತಿತರ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಬಂಧನದ ನಂತರವಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ ಎಂದು ಡಿವೈಎಸ್‍ಪಿ ಸುದರ್ಶನ್ ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.