ಕೊಲೆಗಡುಕರನ್ನು ನಿರ್ದಯವಾಗಿ ಶೂಟೌಟ್ ಮಾಡಿ ಎಂದ ಸಿಎಂ ಕುಮಾರಸ್ವಾಮಿ !
ವಿಜಯಪುರ,ಡಿ.24: "ಜೆಡಿಎಸ್ ಕಾರ್ಯಕರ್ತನ ಕೊಲೆ ಮಾಡಿದ ಹಂತಕನನ್ನು ಮರ್ಸಿಲೆಸ್ ( ನಿರ್ದಯವಾಗಿ ) ಆಗಿ ಶೂಟೌಟ್ ಮಾಡಿ" ಎಂದು ಪೋನ್ ಮೂಲಕ ಸಿಎಂ ಕುಮಾರಸ್ವಾಮಿ ಪೊಲೀಸರಿಗೆ ಆದೇಶಿಸುವ ವೀಡಿಯೋವೊಂದು ವೈರಲ್ ಆಗಿದೆ.
ಬಾಗಲಕೋಟೆಯಿಂದ ಹೆಲಿಕಾಪ್ಟರ್ ಮೂಲಕ ಸೋಮವಾರ ಸಂಜೆ ಸೈನಿಕ ಶಾಲೆಯ ಹೆಲಿಪ್ಯಾಡ್ ಗೆ ಬಂದಿಳಿದ ಕುಮಾರಸ್ವಾಮಿ ಮೊಬೈಲ್ ಮೂಲಕ ಮಾತನಾಡುವಾಗ ಕೊಲೆಯೊಂದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅವರು ಯಾರ ಜೊತೆ ಮಾತನಾಡುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ.
"ತುಂಬಾ ಒಳ್ಳೆ ವ್ಯಕ್ತಿ. ಅಂತಹವನನ್ನು ಕೊಲೆ ಮಾಡಿದ್ದಾರೆ ಅಂದರೆ... ನೀವು ಯಾವ ರೀತಿ ಹ್ಯಾಂಡಲ್ ಮಾಡುತ್ತೀರೊ ಗೊತ್ತಿಲ್ಲ. ಅದೆಲ್ಲಾ ನಿಮ್ಮ ಜವಾಬ್ದಾರಿ. ರಸ್ತೆಯಲ್ಲೇ ಹಾಡಹಗಲೇ ಕೊಲೆ ಮಾಡ್ತಾರೆ ಅಂದ್ರೆ... ನನಗೆ ಇದರಿಂದ ಡಿಸಪಾಯಿಂಟ್ ( ನಿರಾಶೆ) ಆಗಿದೆ. ಅಂತಹವನನ್ನು ಯಾವುದೇ ಕಾರಣಕ್ಕೂ ಬಿಡಬೇಡಿ.. ನೀವು ಏನು ಮಾಡ್ತೀರೋ ಗೊತ್ತಿಲ್ಲ...ಅಂತಹವರನ್ನು ಮರ್ಸಿ ಲೆಸ್ ( ನಿರ್ದಯ ) ಆಗಿ ಶೂಟ್ ಮಾಡಿ ..." ಎಂದು ಹೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅದಕ್ಕೆ ಆ ಕಡೆಯಿಂದ ಏನೋ ಪ್ರತಿಕ್ರಿಯೆ ಬಂದಿದ್ದಕ್ಕೆ.. "ಇರ್ಲಿ ತೊಂದ್ರೆ ಇಲ್ಲಪ್ಪ ಅದಕ್ಕೆಲ್ಲ ನಾನು ಕೇರ್ ಮಾಡಲ್ಲ" ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮದ್ದೂರು ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಈ ಆದೇಶ ನೀಡಿದ್ದಾರೆ ಎಂದು ಹೇಳಲಾಗಿದೆ.
ಇಂದು ಮಂಡ್ಯದ ಮದ್ದೂರಿನ ಪ್ರವಾಸಿ ಮಂದಿರ ಆವರಣದಲ್ಲಿ ಹಾಡಹಗಲೇ ಜೆಡಿಎಸ್ ಮುಖಂಡ ಪ್ರಕಾಶ್ ನನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ನಗರದ ಹೆಲಿಪ್ಯಾಡ್ ನಲ್ಲಿ ಇಳಿದ ತಕ್ಷಣವೇ ಪೊಲೀಸ್ ಅಧಿಕಾರಿಗಳಿಗೆ ಪೋನ್ ಮಾಡಿದ ಸಿಎಂ ಕುಮಾರಸ್ವಾಮಿ ಹಂತಕನ ಎನ್ಕೌಂಟರ್ ಮಾಡುವಂತೆ ಹೇಳಿದ್ದಾರೆ.