ಜ.31 ರೊಳಗೆ ರೈತರ ಸಂಪೂರ್ಣ ಸಾಲ ಮನ್ನಾ: ಸಿಎಂ ಕುಮಾರಸ್ವಾಮಿ

Update: 2018-12-24 14:06 GMT

ಕೊಪ್ಪಳ/ಬೆಂಗಳೂರು, ಡಿ.24: ಮುಂದಿನ ಸಾಲಿನ ಜ.31ರೊಳಗೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಲ ಮನ್ನಾವನ್ನು ಅತ್ಯಂತ ಗಂಭೀರ ಮತ್ತು ಆದ್ಯತೆಯ ವಿಷಯ ಎಂದು ಪರಿಗಣಿಸಿದ್ದು, ಜನವರಿ ಅಂತ್ಯದೊಳಗೆ ಎಲ್ಲ ರೈತರ ಸಾಲಮನ್ನಾ ಮಾಡಲಾಗುವುದು ಎಂದು ಹೇಳಿದರು.

ಸಾಲ ಮನ್ನಾ ವಿಚಾರದಲ್ಲಿ ಸಂಶಯ ಮೂಡಿಸುವ ಹೇಳಿಕೆಗಳು ಬೇಡ. ಬೇರೆ ಇಲಾಖೆಯಲ್ಲಿ ಹಣ ಕಡಿತ ಮಾಡಿ ಸಾಲ ಮನ್ನಾಕ್ಕೆ ನೀಡಿದ್ದಾರೆ ಎಂದು ಬಿಜೆಪಿ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಕಿವಿ ಕೊಡಬಾರದು ಎಂದರು.

ಕಳೆದ ಏಳು ತಿಂಗಳಲ್ಲಿ ಐದು ಬಾರಿ ರೈತರ ಸಭೆ ನಡೆಸಿದ್ದೇವೆ ಎಂದರೆ ಸಾಲಮನ್ನಾಕ್ಕೆ ನಮ್ಮ ಆದ್ಯತೆ ಎಷ್ಟು ಇದೆ ಎಂದು ನೀವೆ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಸರಕಾರದಲ್ಲಿ ಯಾರೂ ರೈತರ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ. ಹೊಸದಿಲ್ಲಿಯಲ್ಲಿ ತಮಿಳುನಾಡಿನ ರೈತರು ಬೆತ್ತಲೆ ಪ್ರತಿಭಟನೆ ಮಾಡಿದರೂ ಕೇಂದ್ರ ಸರಕಾರ ಅವರನ್ನು ಮಾತನಾಡಿಸಲಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಸರಕಾರದಲ್ಲಿ ಇದ್ದಾಗ ಸಮಗ್ರ ಮರಳು ನೀತಿ ತರುತ್ತೇವೆ ಎಂದು ಹೇಳಿದ್ದರು. ಆದರೆ, ಅವರು ಆ ಕೆಲಸ ಮಾಡಲಿಲ್ಲ. ಆರಂಭದಿಂದ ಇಂದಿನವರೆಗೂ ಅದೇ ಸಮಸ್ಯೆ ಇದೆ. ಆದರೆ, ವಿರೋಧ ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮರಳು ಜನಸಾಮಾನ್ಯರಿಗೆ ಸರಳವಾಗಿ ತಲುಪಬೇಕು. ಅದಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾನು ಅಧಿಕಾರಕ್ಕೆ ಬಂದನಂತರ ಅಕ್ರಮ ದಂಧೆಗೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು, ಮರಳು ಅಕ್ರಮ ದಂಧೆ ಸಮ್ಮಿಶ್ರ ಸರಕಾರದ ಸಮಯದಲ್ಲಿ ಆರಂಭವಾಗಿಲ್ಲ. ಅಧಿಕಾರಿಗಳ, ಜನಪ್ರತಿನಿಧಿಗಳ ಮಟ್ಟದಲ್ಲಿ ಈ ದಂಧೆ ನಡೆಯುತ್ತಿದೆ ಎಂದು ಹೇಳಿದರು.

ದ್ರಾಕ್ಷಿ ಬೆಳೆಗಾರರು, ದಾಳಿಂಬೆ ಬೆಳೆಗಾರರ ಸಮಸ್ಯೆ ಬಗ್ಗೆ ಅರಿವಿದೆ. ಮೈತ್ರಿ ಸರಕಾರದಲ್ಲಿ ಜನತೆಯ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ನನ್ನ ವೈಯಕ್ತಿಕ ಆಸಕ್ತಿಯಾಗಿದೆ ಎಂದು ಕುಮಾರಸ್ವಾಮಿ ನುಡಿದರು.

ರೈತರ ಹಣ ತಿನ್ನುವುದು ಪಾಪ: ಯಲಬುರ್ಗಾ ಪಿಎಲ್‌ಡಿ ಬ್ಯಾಂಕಿನಲ್ಲಿ ರೈತರ ಹೆಸರಿನಲ್ಲಿ ಹಣ ದುರಪಯೋಗ ಮಾಡಿಕೊಂಡ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ರೈತರ ಹಣ ತಿನ್ನುವುದು ಪಾಪ ಎಂದರು.

ಈ ವೇಳೆ ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ರಾಜ್ಯ ಕಾರ್ಯದರ್ಶಿ ಕೆ.ಎಂ.ಸಯ್ಯದ್, ವಕ್ತಾರ ಮೌನೇಶ ವಡ್ಡಟ್ಟಿ, ಅಮರೇಗೌಡ ಪಾಟೀಲ, ಪ್ರದೀಪಗೌಡ ಮಾಲಿ ಪಾಟೀಲ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News