×
Ad

"ಬಡವರ ಕಷ್ಟಕ್ಕೆ ಮಿಡಿಯದ 56 ಇಂಚಿನ ಎದೆಯಿದ್ದು ಏನು ಉಪಯೋಗ ?"

Update: 2018-12-24 20:21 IST

ಬೆಂಗಳೂರು, ಡಿ.24: ಪ್ರಧಾನಿ ನರೇಂದ್ರಮೋದಿಯ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಮರ ಸಾರಿದ್ದಾರೆ. ರೈತರ ಸಾಲಮನ್ನಾ ಸೇರಿದಂತೆ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ವಿರುದ್ಧ ತೀಕ್ಷ್ಣ ಟ್ವೀಟ್‌ಗಳನ್ನು ಮಾಡಿದ್ದಾರೆ.

ಕಾಂಗ್ರೆಸ್ ಜಯಗಳಿಸಿರುವ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಲಾಗಿದೆ. ಹಿಂದೆ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಬಿಜೆಪಿ, ರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾದರೂ ಬಡ ರೈತರ ಕಡೆಗೆ ಕಣ್ಣೆತ್ತಿ ನೋಡುತ್ತಿಲ್ಲ. ಬಡವರ ಕಷ್ಟಕ್ಕೆ ಮಿಡಿಯದ 56 ಇಂಚಿನ ಎದೆಯಿದ್ದು ಏನು ಉಪಯೋಗ ಎಂದು ಸಿದ್ದರಾಮಯ್ಯ ಟ್ವಿಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಬರೀ ಭಾಷಣಗಳು ಜನರ ಹೊಟ್ಟೆ ತುಂಬಿಸಲಾರದು ಎಂಬುದನ್ನು ಬಿಜೆಪಿ ಇನ್ನೂ ಅರಿತಿಲ್ಲ. ಹೀಗಾಗಿಯೇ, ಕೋಮುವಾದ ಬಿಟ್ಟು ಅಭಿವೃದ್ಧಿಯ ಬಗ್ಗೆ ಅವರು ಮಾತನಾಡುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಎಷ್ಟು ಸತ್ಯವೋ, ನಮ್ಮ ನಾಯಕ ರಾಹುಲ್‌ ಗಾಂಧಿ ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು ಸಿದ್ದರಾಮಯ್ಯ ಟ್ವಿಟ್‌ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಪ್ರಧಾನಿ ನರೇಂದ್ರಮೋದಿಯ ವರ್ಚಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇನ್ನು ಮುಂದೆ ಮೋದಿಯ ಮೋಡಿ, ಅಮಿತ್ ಶಾ ಮ್ಯಾಜಿಕ್ ಎಲ್ಲವೂ ಬರಿ ಕನಸಷ್ಟೇ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಬೇಕಾದ ದುಸ್ಥಿತಿ ಬಂದಿದೆ ಎಂದು ಸಿದ್ದರಾಮಯ್ಯ ಟ್ವಿಟ್‌ನಲ್ಲಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News