ಬಾಬಾ ಬುಡನ್‍ಗಿರಿಯ ನಿಷೇಧಿತ ಪ್ರದೇಶದಲ್ಲಿ ಕೇಸರಿ ಬಾವುಟ ಹಾರಿಸಿದ ಕಿಡಿಗೇಡಿ: ವಿಡಿಯೊ ವೈರಲ್
ಚಿಕ್ಕಮಗಳೂರು, ಡಿ.24: ತಾಲೂಕಿನ ಬಾಬಾ ಬುಡನ್‍ಗಿರಿಯಲ್ಲಿ ಶನಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ದತ್ತಜಯಂತಿ ಕಾರ್ಯಕ್ರಮದ ವೇಳೆ ಉತ್ಸವದ ಅಂತಿಮ ಹಂತದಲ್ಲಿ ದತ್ತ ಪಾದುಕೆಗಳ ದರ್ಶನಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ಬಾಬಾ ಬುಡನ್‍ಗಿರಿ ಆವರಣದಲ್ಲಿ ನಿಷೇಧಿತ ಪ್ರದೇಶ ಎಂದು ಗುರುತಿಸಲಾಗಿರುವ ಜಾಗದ ಸಮೀಪದಲ್ಲಿ ಕೇಸರಿ ಬಾವುಟ ಊರಿ ಸಂಭ್ರಮಿಸಿದ ವಿಡಿಯೋವೊಂದು ಜಿಲ್ಲಾದ್ಯಂತ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾಡಳಿತ ಡಿ.22ರಂದು ಶನಿವಾರ ಹಮ್ಮಿಕೊಂಡಿದ್ದ ದತ್ತ ಜಯಂತಿ ಕಾರ್ಯಕ್ರಮ ಬೆಳಗ್ಗಿನಿಂದ ಅತ್ಯಂತ ಶಾಂತಿಯುತವಾಗಿ ನಡೆದಿತ್ತು. ಆದರೆ ಶನಿವಾರ ಸಂಜೆ ಎಲ್ಲ ಕಾರ್ಯಕ್ರಮಗಳು ಮುಗಿಯುವ ಹೊತ್ತಿನಲ್ಲಿ ಬಿಳಿ ಚೂಡಿದಾರ ಧರಿಸಿದ್ದ ತೃತೀಯ ಲಿಂಗಿ ಎಂದು ಹೇಳಲಾಗುತ್ತಿರುವ ಕಿಡಿಗೇಡಿಯೊಬ್ಬ ಬಾಬಾಬುಡನ್‍ಗಿರಿಯಲ್ಲಿ ನಿಷೇಧಿತ ಪ್ರದೇಶ ಎಂದು ಗುರುತಿಸಲಾಗಿರುವ ಪ್ರದೇಶದ ಸಮೀಪದ ಬೇಲಿ ಹಾಕಲಾಗಿದ್ದ ಪ್ರದೇಶದಲ್ಲಿ ಕೇಸರಿ ಬಾವುಟವೊಂದನ್ನು ಹಾರಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಕೇಸರಿ ಮಾಲಾಧಾರಿಗಳು ಕೇಕೆ ಹಾಕುತ್ತಾ ಸಂಭ್ರಮಿಸಿದ್ದಾರೆ.
ಈ ದೃಶ್ಯಗಳು ಮೊಬೈಲ್‍ವೊಂದರಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರಿಂದ ವಿಡಿಯೋ ಎಲ್ಲೆಡೆ ವ್ಯಾಪಕವಾಗಿ ವೈರಲ್ ಆಗಿದ್ದು, ಕಿಡಿಗೇಡಿಯ ಕೃತ್ಯಕ್ಕೆ ಸಾಮಾಜಿಕ ಜಾಲಾತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸಂಘಪರಿವಾರದವರು ಜಿಲ್ಲೆಯ ಕೋಮುಸೌಹಾರ್ದಕ್ಕೆ ಧಕ್ಕೆ ತರಲು ಸದಾ ಹವಣಿಸುತ್ತಿರುತ್ತಾರೆ. ಶನಿವಾರ ದತ್ತಜಯಂತಿಯನ್ನು ಜಿಲ್ಲಾಡಳಿತ ಅತ್ಯಂತ ಶಾಂತಿಯುತವಾಗಿ ನಡೆಯುವಂತೆ ಬಿಗಿ ಮುಂಜಾಗ್ರತಾ ಕ್ರಮವಹಿಸಿದೆ. ಇದರಿಂದ ಹತಾಶರಾಗಿರುವ ಸಂಘಪರಿವಾರದ ಮುಖಂಡರು ತಮ್ಮ ಕಿಡಿಗೇಡಿ ಹಿಂಬಾಲಕರ ಮೂಲಕ ಇಂತಹ ಕೃತ್ಯ ಎಸಗಿ ಸೌಹಾರ್ದ ಹಾಳು ಮಾಡಲು ಪ್ರಯತ್ನಿಸಿದ್ದಾರೆ. ಶಾಸಕ ಸಿಟಿ ರವಿ ಹಾಗೂ ಅವರ ಹಿಂಬಾಲಕರ ಉದ್ದೇಶ ಇದುವೇ ಆಗಿದೆ ಎಂದು ನಗರದ ಪ್ರಜ್ಞಾವಂತ ನಾಗರಿಕರು ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದತ್ತಜಯಂತಿ ಸಂದರ್ಭ ದತ್ತಮಾಲಾಧಾರಿಯೊಬ್ಬ ದತ್ತಪೀಠದ ಆವರಣದಲ್ಲಿ ಕೇಸರಿ ಬಾವುಟ ಊರಿದ್ದಾನೆ. ಆದರೆ ಈ ಪ್ರದೇಶ ನಿಷೇಧಿತ ಪ್ರದೇಶವಲ್ಲ. ಆವರಣದ ಕೆಲವೆಡೆ ಕಿಡಿಗೇಡಿಗಳು ಬಾವುಟ ಊರುವುದು ಸಾಮಾನ್ಯ ಸಂಗತಿ. ಶನಿವಾರ ನಿಷೇಧಿತ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಭದ್ರತೆ ಒದಗಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ದತ್ತಜಯಂತಿ ಶಾಂತಿಯುತವಾಗಿ ನಡೆದಿದೆ. ದತ್ತಮಾಲೆ ಧರಿಸಿದ್ದ ಉತ್ತರ ಕರ್ನಾಟಕ ಭಾಗದಿಂದ ಬಂದಿದ್ದ ತೃತೀಯ ಲಿಂಗಿಯೊಬ್ಬ ಹೀಗೆ ಬಾವುಟ ಊರಿದ್ದಾನೆ. ಆ ಜಾಗ ನಿಷೇಧಿತ ಜಾಗವಲ್ಲದ ಕಾರಣ ಘಟನೆ ಸಂಬಂಧ ಯಾವುದೇ ದೂರು ದಾಖಲಿಸಿಕೊಂಡಿಲ್ಲ.
- ಹರೀಶ್ ಪಾಂಡೆ, ಎಸ್ಪಿ