×
Ad

ಮೈಸೂರಿನಲ್ಲಿ ಸಂಭ್ರಮ, ಸಡಗರದ ಕ್ರಿಸ್‍ಮಸ್ ಆಚರಣೆ

Update: 2018-12-25 23:23 IST

ಮೈಸೂರು,ಡಿ.25: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ರಿಸ್‍ಮಸ್ ಸಡಗರ, ಸಂಭ್ರಮ ಮನೆ ಮಾಡಿತ್ತು. ಯೇಸುವಿನ ಜಯಂತಿಯನ್ನು ಅರಮನೆ ನಗರಿ ಮೈಸೂರಿನ ಎಲ್ಲೆಡೆ ಸಡಗರ, ಸಂಭ್ರಮದಿಮದ ಕ್ರೈಸ್ತ ಬಾಂಧವರು ಆಚರಿಸಿದರು. ಭಕ್ತಿಭಾವದೊಂದಿಗೆ ಯೇಸುವಿಗೆ ಪ್ರಾರ್ಥನೆ ಸಲ್ಲಿಸಿದರು. 

ಚರ್ಚ್‍ಗಳು ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ ದಿಂದ ಕಂಗೊಳಿಸುತ್ತಿತ್ತು. ನಗರದ ಪ್ರಮುಖ ಆಕರ್ಷಣೆ ಕೇಂದ್ರವಾದ ಅಶೋಕ ರಸ್ತೆಯ ಸಂತ ಫಿಲೋಮಿನಾ ಚರ್ಚ್‍ನಲ್ಲಿ ಕ್ರಿಸ್‍ಮಸ್ ಆಚರಣೆ ನಡೆಯಿತು. ಕ್ರಿಸ್ಮಸ್ ಹಿನ್ನಲೆಯಲ್ಲಿ ಚರ್ಚ್ ಗಳಲ್ಲಿ  ಭಕ್ತ ಸಮೂಹ ತುಂಬಿ ತುಳುಕುತ್ತಿತ್ತು. ಬೆಳಗ್ಗೆಯಿಂದ ರಾತ್ರಿ ತನಕ ಸಾವಿರಾರು ಜನರು ಕುಟುಂಬ ಸಮೇತ ಆಗಮಿಸಿ ಬಾಲ ಯೇಸುವಿಗೆ ನಮಿಸಿ ಪ್ರಾರ್ಥನೆ ಸಲ್ಲಿಸಿದರು. ನಿನ್ನೆ ಸಂಜೆಯಿಂದಲೇ ಚರ್ಚ್ ಆವರಣದಲ್ಲಿ ಕ್ರಿಸ್‍ಮಸ್ ಹಬ್ಬಕ್ಕೆ ನಾನಾ ಕಡೆಯಿಂದ ಭಕ್ತಸಾಗರ ಹರಿದು ಬರುತ್ತಿದೆ.

ಏರುದನಿಯಲ್ಲಿ ಚರ್ಚಿನೊಳಗೆ ಕರೋಲ್ ಗೀತಗಾಯನ ಪ್ರತಿಧ್ವನಿದೆ. ರಾತ್ರಿ 11.30 ರಿಂದ 12 ರತನಕ ಗೀತಗಾಯನ ನಡೆದಿತ್ತು. ಮಂದ ಬೆಳಕಿನ ನಡುವೆ ಚುಮುಚುಮು ಕೊರೆಯುವ ಚಳಿಯಲ್ಲಿಯೇ ಸಾವಿರಾರು ಕ್ರೈಸ್ತ ಬಾಂಧವರು ಏಸುದೇವನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಶ್ವೇತ ವಸ್ತ್ರಧಾರಿಗಳು ಚರ್ಚ್‍ನ ಪರಿವಾರದೊಂದಿಗೆ ಛತ್ರಿ ಚಾಮರಗಳ ಹಿಮ್ಮೇಳದೊಂದಿಗೆ ಬಾಲಯೇಸುವಿನ ಪುಟ್ಟ ಮೂರ್ತಿಯನ್ನು ಹೊತ್ತು ಮೆರವಣಿಗೆ ಸಾಗಿದರು. ಬಾಲ ಏಸುವಿನ ಪ್ರತಿಷ್ಠಾಪನೆಯನ್ನು ಮೈಸೂರು ಧರ್ಮಕ್ಷೇತ್ರದ ಕ್ರೈಸ್ತ ಧರ್ಮಗುರು ಡಾ.ಕೆ.ಎ.ವಿಲಿಯಂ ಅವರು ನೆರವೇರಿಸಿದರು.

ನಂತರ ಮಧ್ಯರಾತ್ರಿ 1 ರವರೆಗೆ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲಾಯಿತು. ಬಿಷಪ್ ನೇತೃತ್ವದಲ್ಲಿ ಹಲವು ಚರ್ಚ್‍ಗಳ ಪಾದ್ರಿಗಳೂ ಕೂಡ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಾನಾ ಧರ್ಮದ ಸಾವಿರಾರು ಜನರು ಚರ್ಚ್ ಹೊರಗೆ ಮತ್ತು ಒಳಭಾಗದಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುವ ಮೂಲಕ ಏಸುವಿಗೆ ಪೂಜೆ ಸಲ್ಲಿಸಿದರು. ಇನ್ನು ಕೆಲವರು ಬಾಲಯೇಸುವಿನ ಜನ್ಮಸ್ಥಾನ ಗೋದಲಿಯ ಬಳಿ ನಿಂತು ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಬೆಂಗಳೂರು ಬಿ.ಎನ್ ರಸ್ತೆಯ ವೆಸ್ಲಿ ಚರ್ಚ್, ಹಿನಕಲ್ ರಾಜೀವನಗರ, ಎನ್.ಆರ್.ಮೊಹಲ್ಲಾ, ಲಕ್ಷ್ಮಿಪುರಂ, ಜೋಡಿಟ್ಯಾಂಕ್ ಬಳಿಯ ಚರ್ಚ್ ಗಳಿಗೆ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು, ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇಂದು ಬೆಳಿಗ್ಗೆ 5 ಗಂಟೆಗೆ ತಮಿಳಿನಲ್ಲಿ, 6ಕ್ಕೆ ಕನ್ನಡದಲ್ಲಿ, 7ಕ್ಕೆ ಇಂಗ್ಲಿಷಿನಲ್ಲಿ ಪ್ರಾರ್ಥನೆ ನಡೆದಿದ್ದು, ಸಂಜೆ 7ಕ್ಕೆ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News