ಇನ್ನು 4 ತಿಂಗಳು ಪ್ರಧಾನಿ ಮೋದಿ ವಿದೇಶ ಪ್ರವಾಸ ಇಲ್ಲ!

Update: 2018-12-26 04:13 GMT

ಹೊಸದಲ್ಲಿ, ಡಿ.26: ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅತಿಹೆಚ್ಚು ವಿದೇಶ ಪ್ರವಾಸ ಕೈಗೊಂಡು ಸುದ್ದಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮುಂದಿನ 4 ತಿಂಗಳು ಯಾವುದೇ ವಿದೇಶ ಪ್ರವಾಸ ಕೈಗೊಳ್ಳುತ್ತಿಲ್ಲ ಎನ್ನುವುದು ಬಿಗ್ ನ್ಯೂಸ್. 2019ರ ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಬೇಕಿದ್ದು, ಇದಕ್ಕೆ ರಣತಂತ್ರ ರೂಪಿಸಲು ಮತ್ತು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ತಮ್ಮ ಇಡೀ ಸಮಯವನ್ನು ಮೀಸಲಿಟ್ಟಿದ್ದಾರೆ!

ಕಳೆದ ಒಂದು ವರ್ಷದಲ್ಲಿ 14 ವಿದೇಶ ಪ್ರವಾಸಗಳನ್ನು ಕೈಗೊಂಡಿರುವ ಮೋದಿ, ಮುಂದಿನ ತಿಂಗಳುಗಳಲ್ಲಿ ಯಾವುದೇ ಪ್ರಮುಖ ಬಹುರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಹೊಣೆಗಾರಿಕೆ ಜತೆಗೆ ಬಿಜೆಪಿಯ ಪ್ರಮುಖ ಪ್ರಚಾರಕರಾಗಿ ಕಾರ್ಯನಿರ್ವಹಿಸಬೇಕಿರುವುದೂ ಇದಕ್ಕೆ ಕಾರಣ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಕಳೆದ ಐದು ವರ್ಷಗಳಲ್ಲೇ ಅತ್ಯಂತ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಬೇಕಿದೆ. ಜನವರಿ 21-23ರವರೆಗೆ ವಾರಣಾಸಿಯಲ್ಲಿ ನಡೆಯುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೋದಿ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

ಕಳೆದ ಅಕ್ಟೋಬರ್‌ನಿಂದೀಚೆಗೆ ಮೋದಿ ಜಪಾನ್, ಸಿಂಗಾಪುರ, ಮಾಲ್ಡೀವ್ಸ್, ಅರ್ಜೆಂಟೀನಾಗೆ ಭೇಟಿ ನೀಡಿದ್ದಾರೆ. ದೇಶದಲ್ಲಿ ಕೃಷಿ ಸಮಸ್ಯೆ ಮತ್ತು ಉದ್ಯೋಗಾವಕಾಶದ ಕೊರತೆ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದ್ದು, ರಾಜಸ್ಥಾನದಲ್ಲಿ ಮೋದಿಯವರ ಬಿಡುವಿಲ್ಲದ ಪ್ರಚಾರದಿಂದಾಗಿ ಸೋಲಿನ ಅಂತರ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗೆ ಮೋದಿಯವರನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ಪಕ್ಷ ಕಾರ್ಯತಂತ್ರ ರೂಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News