90 ಕೋಟಿ ರೂ. ಹಗರಣದಲ್ಲಿ ಶೋಭಾ ಕರಂದ್ಲಾಜೆ ಭಾಗಿ: ಆರೋಪ

Update: 2018-12-26 13:41 GMT

ಬೆಂಗಳೂರು, ಡಿ.26: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದ ಸಂದರ್ಭದಲ್ಲಿ ಬರೋಬ್ಬರಿ 90 ಕೋಟಿ ರೂ. ಹಗರಣ ಮಾಡಿರುವುದಾಗಿ ಆರೋಪಿಸಿ ನೀತಿ ಟ್ರಸ್ಟ್ ಅಧ್ಯಕ್ಷ ಜಯನ್ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ದೂರು ನೀಡಿ, ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಬುಧವಾರ ನಗರದ ರೇಸ್‌ಕೋರ್ಸ್ ರಸ್ತೆಯ ಎಸಿಬಿ ಕಚೇರಿಯಲ್ಲಿ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2012-13ನೇ ಸಾಲಿನಲ್ಲಿ ಬಂಜ್ ಕೇಬಲ್ ಕಾಮಗಾರಿಯಲ್ಲಿ ಬಹು ಕೋಟಿ ಅವ್ಯವಹಾರ ನಡೆದಿದೆ. ಹೀಗಾಗಿ, ಶೋಭಾ ಕರಂದ್ಲಾಜೆ ಹಾಗೂ ಒಟ್ಟು 12 ಜನ ಅಧಿಕಾರಿಗಳ ವಿರುದ್ದ ತನಿಖೆ ನಡೆಸುವಂತೆ ಆಗ್ರಹಿಸಿದರು.

ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್, ಕನೆಕ್ಟರ್ ಸ್ವಿಚ್ ಖರೀದಿಯಲ್ಲಿ 20 ಸಾವಿರ ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್ ಖರೀದಿ ಮಾಡಿದ್ದರು. ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್ ಒಂದರ ಮಾರುಕಟ್ಟೆ ದರ 800 ರೂ. ಆದರೆ, ಬೆಸ್ಕಾಂ ನಿರ್ಧರಿಸಿದ ದರ 1,987 ರೂಪಾಯಿ. ಆದರೆ ಖರೀದಿ ಮಾಡಿರುವುದು 6,000 ರೂ. ಗೆ. ಇದರಿಂದ 4,013 ರೂಪಾಯಿ ವ್ಯತ್ಯಾಸ ಕಂಡುಬಂದಿದೆ. ಇದಲ್ಲದೆ, 49,000 ಕನೆಕ್ಟರ್ ಖರೀದಿಯಲ್ಲಿಯೂ ಅಕ್ರಮವಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಒಂದು ಕನೆಕ್ಟರ್ ಮಾರುಕಟ್ಟೆ ದರ 80, ಬೆಸ್ಕಾಂ ನಿಗದಿ ಮಾಡಿದ್ದು 152, ಖರೀದಿ ಆಗಿರುವುದು 855 ರೂಪಾಯಿಗೆ. ಇದರಲ್ಲಿ ಒಂದು ಕನೆಕ್ಟರ್‌ಗೆ 703 ರೂ. ವ್ಯತ್ಯಾಸ ಕಂಡುಬಂದಿದೆ. ಇನ್ನು, ಕೂಲಿ ನೀಡಿರುವುದರಲ್ಲೂ ಅಕ್ರಮ ನಡೆದಿದೆ ಎಂದು ದೂರಿದರು.

ಶೋಭಾ ಕರಂದ್ಲಾಜೆ ಅಧಿಕಾರದಲ್ಲಿದ್ದಾಗ ಬೆಸ್ಕಾಂ ಕಾರ್ಯದರ್ಶಿಯಾಗಿದ್ದ ಎಸ್. ಸೆಲ್ವಕುಮಾರ್ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಜಯನ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News