×
Ad

ಬರಪೀಡಿತ ತಾಲೂಕುಗಳ ಸಂಖ್ಯೆ 156ಕ್ಕೆ ಏರಿಕೆ: ಸಚಿವ ಆರ್.ವಿ.ದೇಶಪಾಂಡೆ

Update: 2018-12-26 20:00 IST

ಬೆಂಗಳೂರು, ಡಿ.26: ರಾಜ್ಯದಲ್ಲಿನ ಬರಪೀಡಿತ ತಾಲೂಕುಗಳ ಸಂಖ್ಯೆಯು 100 ರಿಂದ 156ಕ್ಕೆ ಏರಿಕೆಯಾಗಿದೆ. ಈ ತಾಲೂಕುಗಳಲ್ಲಿನ ಬೆಳೆ ಹಾನಿ ಮತ್ತು ಕ್ಷೇತ್ರ ತಪಾಸಣೆ ಕೈಗೊಂಡ ನಂತರ ಈ ತಾಲೂಕುಗಳನ್ನು ತೀವ್ರ ಹಾಗೂ ಸಾಧಾರಣ ಬರಪೀಡಿತ ಪ್ರದೇಶವೆಂದು ಘೋಷಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆನಂತರ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಬೆಳೆ ನಷ್ಟ ಕುರಿತು ಜಂಟಿ ಸಮೀಕ್ಷೆ ನಡೆಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗುವುದು ಎಂದರು.

ಬರಪೀಡಿತ 100 ತಾಲೂಕುಗಳಲ್ಲಿ ಕುಡಿಯುವ ನೀರು ಸೇರಿದಂತೆ ಇನ್ನಿತರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಶಾಸಕರ ಅಧ್ಯಕ್ಷತೆಯಲ್ಲಿರುವ ಟಾಸ್ಕ್‌ಫೋರ್ಸ್ ಗಳಿಗೆ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಸದನದಲ್ಲಿ ಕೊಟ್ಟ ಮಾತಿನಂತೆ ಹೆಚ್ಚುವರಿಯಾಗಿ 50 ಲಕ್ಷ ರೂ.ಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಿಡುಗಡೆ ಮಾಡುತ್ತಿದ್ದೇವೆ. ಅಲ್ಲದೆ, ಈಗ ಘೋಷಿಸಿರುವ 56 ತಾಲೂಕುಗಳಿಗೂ ಈ ಹಿಂದೆ 25 ಲಕ್ಷ ರೂ.ಗಳನ್ನು ಕೊಟ್ಟಿದ್ದೇವೆ. ಈಗ ಹೆಚ್ಚುವರಿಯಾಗಿ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಪ್ರವಾಹ ಪರಿಸ್ಥಿತಿಯಿಂದಾಗಿ ಬೆಳೆ ಹಾನಿಯಾಗಿರುವ ಸಂತ್ರಸ್ತ ರೈತರಿಗೆ ‘ಪರಿಹಾರ’ ತಂತ್ರಾಂಶದ ಮೂಲಕ ಇನ್‌ಪುಟ್ ಸಬ್ಸಿಡಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ, 1,53,587 ರೈತರ ದಾಖಲೆಗಳನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದ್ದು, 6,343 ರೈತರಿಗೆ 6.5 ಕೋಟಿ ರೂ.ಇನ್‌ಪುಟ್ ಸಬ್ಸಿಡಿಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿದರು.

ಮೂಲಸೌಲಭ್ಯಗಳಿಗೆ ಆಗಿರುವ ಹಾನಿಗೆ ಸಂಬಂಧಿಸಿದ 214.03 ಕೋಟಿ ರೂ. ಮೊತ್ತವನ್ನು ಜಿಲ್ಲಾವಾರು ಬಿಡುಗಡೆ ಮಾಡಲಾಗುವುದು. ಈ ವರ್ಷದ ಮುಂಗಾರು ಹಂಗಾಮಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ‘ಪರಿಹಾರ’ ಆನ್‌ಲೈನ್ ವ್ಯವಸ್ಥೆಗೆ ತುಂಬಲಾಗುತ್ತಿದೆ ಎಂದು ದೇಶಪಾಂಡೆ ತಿಳಿಸಿದರು.

ಹಿಂಗಾರು ಹಂಗಾಮಿನಲ್ಲಿ 31.80 ಲಕ್ಷ ಹೆಕ್ಟೇರ್ ಪ್ರದೇಶದ ಗುರಿಗೆ ಡಿಸೆಂಬರ್ 21ರ ವರೆಗೆ 26.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಅಂದರೆ ಶೇ.81.89ರಷ್ಟು ಬಿತ್ತನೆಯಾಗಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಗೆ 29.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಅಂದಾಜು 5.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ ಎಂದು ದೇಶಪಾಂಡೆ ತಿಳಿಸಿದರು.

ರಾಜ್ಯದಲ್ಲಿ ಪ್ರವಾಹ ಹಾಗೂ ಭೂ ಕುಸಿತ ಮತ್ತು ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯಿಂದಾಗಿ ಅಂದಾಜು 20 ಸಾವಿರ ಕೋಟಿ ರೂ.ನಷ್ಟ ಉಂಟಾಗಿದೆ. ಬರ ಪರಿಹಾರ ಕಾರ್ಯಕ್ಕಾಗಿ ಎನ್‌ಡಿಆರ್‌ಎಫ್ ಅಡಿಯಲ್ಲಿ 2,434 ಕೋಟಿ ರೂ.ಗಳನ್ನು ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.

ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು. ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗಬಾರದು. ಹಾಗೆಯೇ ಜಾನುವಾರುಗಳ ಮೇವು ಖರೀದಿಗೆ ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಜನ ಗುಳೆ ಹೋಗುವುದನ್ನು ತಡೆಯಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯು 8.50 ಕೋಟಿ ಮಾನವ ದಿನಗಳನ್ನು ಸೃಜಿಸಲು ಗುರಿ ಹೊಂದಲಾಗಿದೆ. ಈಗಾಗಲೆ 6.30 ಕೋಟಿ ಮಾನವ ದಿನಗಳ ಸೃಜನೆಯಾಗಿದೆ. ರೈತರಿಗೆ 10 ಕೋಟಿ ರೂ.ವೆಚ್ಚದಲ್ಲಿ 5 ಲಕ್ಷ ಮಿನಿಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

ಖಾತೆ ರಹಿತ ಸಚಿವ ಮಾಡಲಿ

ನಾನು ಇಂತಹ ಖಾತೆಯೇ ಬೇಕು ಎಂದು ಯಾರ ಬಳಿಯೂ ಕೇಳಿಲ್ಲ. ಕೊಟ್ಟ ಖಾತೆಯನ್ನು ನಿರ್ವಹಣೆ ಮಾಡುವುದಷ್ಟೇ ನನ್ನ ಕೆಲಸ. ನನ್ನ ಬಳಿ ಇರುವ ಎಲ್ಲ ಖಾತೆಗಳನ್ನು ಪಡೆದುಕೊಂಡು, ಖಾತೆ ರಹಿತ ಸಚಿವನನ್ನಾಗಿ ಮಾಡಿದರೂ ಸಮಸ್ಯೆಯಿಲ್ಲ.

-ಆರ್.ವಿ.ದೇಶಪಾಂಡೆ, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News