ಶಿವಮೊಗ್ಗ: ಅಣ್ಣನ ಕೊಲೆಯಲ್ಲಿ ಅಂತ್ಯ ಕಂಡ ಸಹೋದರರ ನಡುವಿನ ಜಗಳ
ಶಿವಮೊಗ್ಗ, ಡಿ. 26: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಏರ್ಪಟ್ಟ ಕಲಹ, ಅಣ್ಣನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ರೇವಣಪ್ಪ (45) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆತನ ತಮ್ಮ ಪ್ರಕಾಶ್ (37) ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್ ಪೆಕ್ಟರ್ ಜಿ.ಹೆಚ್.ಭಾರತಿ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಘಟನೆ ಹಿನ್ನೆಲೆ: ಕೊಲೆಗೀಡಾದ ರೇವಪ್ಪ ಶಿವಮೊಗ್ಗದ ಕ್ಲಬ್ ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿ ಪ್ರಕಾಶ್ ಕೃಷಿ ಕೆಲಸ ಮಾಡುತ್ತಿದ್ದು, ಹೊಳಲೂರಿನಲ್ಲಿಯೇ ನೆಲೆಸಿದ್ದ. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಏರ್ಪಟ್ಟ ವೈಮನಸ್ಸಿನ ಹಿನ್ನೆಲೆಯಲ್ಲಿ ಸಹೋದರರು ಕಳೆದ ಕೆಲ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆಸ್ತಿ ವಿಚಾರವಾಗಿ ಸಹೋದರರ ನಡುವೆ ನಿರಂತರ ಕಲಹವಾಗುತ್ತಿತ್ತು. ಬುಧವಾರ ರೇವಪ್ಪರವರು ಹೊಳಲೂರು ಗ್ರಾಮದಲ್ಲಿರುವ ನಿವೇಶನದ ಸ್ವಚ್ಚತೆಯಲ್ಲಿ ತೊಡಗಿದ್ದಾಗ, ಆರೋಪಿ ಪ್ರಕಾಶ ಕೂಡ ನಿವೇಶನದ ಸ್ವಚ್ಚತೆಗೆ ಮುಂದಾಗಿದ್ದಾನೆ. ಈ ವೇಳೆ ಸಹೋದರರ ನಡುವೆ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಮಿಲಾಯಿಸಿದ್ದಾರೆ. ತಾಳ್ಮೆ ಕಳೆದುಕೊಂಡ ಆರೋಪಿ ಪ್ರಕಾಶನು, ತನ್ನ ಬಳಿಯಿದ್ದ ಕುಡುಗೋಲು ಹಾಗೂ ಹಾರೆಯಿಂದ ಅಣ್ಣನ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ರೇವಪ್ಪರವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಪೊಲೀಸರ ತನಿಖೆಯ ನಂತರವಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.