ಭೂಗಳ್ಳರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳ ಮೀನಾಮೇಷ: ದಸಂಸ ಮುಖಂಡ ಬೆಟ್ಟಯ್ಯ ಕೋಟೆ ಆರೋಪ

Update: 2018-12-26 16:30 GMT

ಮೈಸೂರು,ಡಿ.26: ನಗರದ ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆಯ ಪ್ರದೇಶವನ್ನು ಭೂ ಮಾಫಿಯಾ ದಲ್ಲಾಳಿಗಳು ಅಕ್ರಮವಾಗಿ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.22ರಂದು ರಾತ್ರಿ 7ಕ್ಕೆ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ತರಕಾರಿ ಮಾರುಕಟ್ಟೆ ಆವರಣಕ್ಕೆ ಬಂದು ಅಲ್ಲಿ ವ್ಯಾಪಾರ ಮಾಡುತ್ತಿದ್ದ ರೈತರು ಮತ್ತು ಮಾರಾಟಗಾರರನ್ನು ಬೆದರಿಸಿ ಕಂಪೌಂಡ್ ನಿರ್ಮಿಸಲು ಮುಂದಾಗಿದ್ದಾರೆ. ಇದರ ವಿರುದ್ಧ ದಲಿತ ಸಂಘರ್ಷ ಸಮಿತಿ ಹೋರಾಟ ಮಾಡಿದಾಗ ಕಂಪೌಂಡ್ ನಿರ್ಮಾಣದ ಕಾರ್ಯವನ್ನು ನಿಲ್ಲಿಸಿದ್ದಾರೆ. ಈ ಘಟನೆಯು ಅಧಿಕಾರಿಗಳ ಗಮನಕ್ಕೆ ಬಂದರೂ ಭೂಗಳ್ಳರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿದರು.

ಮೈಸೂರು ನಗರದಲ್ಲಿ ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಸಾರ್ವಜನಿಕ ಭೂಮಿಯನ್ನು ಅಕ್ರಮವಾಗಿ ಕಬಳಿಸುವ ಹುನ್ನಾರಗಳು ನಡೆಯುತ್ತಿವೆ. ಕೆಲವು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೂಗಳ್ಳರಿಗೆ ರಕ್ಷಣೆ ನೀಡುತ್ತಿರುವುದರಿಂದ ಸಾರ್ವಜನಿಕ ಆಸ್ತಿಗಳಿಗೆ ವಾರಸುದಾರರಿಲ್ಲದಂತಾಗಿದೆ. ಇಂಥ ಪ್ರಕರಣಗಳು ನಗರದಾದ್ಯಂತ ನಡೆಯುತ್ತಿದ್ದು, ಸಾರ್ವಜನಿಕ ಆಸ್ತಿಯನ್ನು ಸಾರ್ವಜನಿಕರೇ ರಕ್ಷಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಪದಾಧಿಕಾರಿಗಳಾದ ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಉಮಾ ಮಹದೇವ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News