ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ

Update: 2018-12-26 17:18 GMT

ಹರಪನಹಳ್ಳಿ, ಡಿ.26: ದಾವಣಗೆರೆ ಜಿಲ್ಲೆಯಿಂದ ಹರಪನಹಳ್ಳಿ ತಾಲೂಕನ್ನು ಬೇರ್ಪಡಿಸಿ ಬಳ್ಳಾರಿಗೆ ಸೇರಿಸಿ ರಾಜ್ಯ ಸರಕಾರ ಡಿ.26ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ.

1997ರಲ್ಲಿ ದಾವಣಗೆರೆ ಹೊಸ ಜಿಲ್ಲೆಯಾಗಿ ರೂಪುಗೊಂಡ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಗೆ ಸೇರಿದ್ದ ಹರಪನಹಳ್ಳಿ ತಾಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರಿಸಲಾಗಿತ್ತು. ಆದರೆ, ಬಳ್ಳಾರಿ ಜಿಲ್ಲೆಗೆ ಹೈದರಾಬಾದ್- ಕರ್ನಾಟಕಕ್ಕೆ ನೀಡಲಾಗಿದ್ದ ಸಂವಿಧಾನದ 371(ಜೆ) ಸವಲತ್ತು ದೊರೆತ ಬಳಿಕ ಈ ಭಾಗದ ಜನರು ನಮಗೂ ಈ ಸವಲತ್ತು ಸಿಗಬೇಕು. ನಾವು ಮೂಲತಃ ಬಳ್ಳಾರಿಗೆ ಸೇರಿದವರು. ಆದರೆ, 1997ರಲ್ಲಿ ಹೊಸ ಜಿಲ್ಲೆಗಳ ರಚನೆ ವೇಳೆ ನಮ್ಮನ್ನು ಬಳ್ಳಾರಿಯಿಂದ ಬೇರ್ಪಡಿಸಿ, ದಾವಣಗೆರೆಗೆ ಸೇರಿಸಲಾಗಿದೆ ಎಂಬ ಕೂಗು ಎತ್ತಿದರು.

ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿರುವ ಹರಪನಹಳ್ಳಿ ಅಭಿವೃದ್ಧಿ ದೃಷ್ಟಿಯಿಂದ ಈ ಕಾರ್ಯ ಅನಿವಾರ್ಯವಾಗಿದೆ ಎಂಬ ಅಭಿಪ್ರಾಯ ರಾಜಕೀಯ ನಾಯಕರು, ಜನಪ್ರತಿನಿಧಿಗಳಲ್ಲೂ ಮೂಡಿತ್ತು. ಇದರ ಫಲವಾಗಿ ಹಂತ ಹಂತವಾಗಿ ಹೋರಾಟ ಆರಂಭಗೊಂಡಿದ್ದವು.

ಕಳೆದ ವಿಧಾನ ಸಭಾ ಚುನಾವಣೆ ವೇಳೆ ಅಂದಿನ ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಎಂ.ಪಿ. ರವೀಂದ್ರ ಬಲವಾಗಿ ಸರಕಾರ ಮಟ್ಟದಲ್ಲಿ ಹೋರಾಟ ನಡೆಸಿದ್ದರು. ಹರಪನಹಳ್ಳಿಯನ್ನು ಬಳ್ಳಾರಿಗೆ ಸೇರಿಸಲೇಬೇಕೆಂದು ಪಟ್ಟುಹಿಡಿದರು. ಸರಕಾರ ಬಗ್ಗದೇ ಹೋದಾಗ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಅವರು ಮುಂದಾಗಿದ್ದರು. ಬಳಿಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹರಪನಹಳ್ಳಿಯನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಳಿಸುವ ಅಧಿಸೂಚನೆ ಹೊರಡಿಸಿತ್ತು. ಅಂದಿನಿಂದ ಆರಂಭವಾಗಿದ್ದ ಪುನರ್ ಸೇರ್ಪಡೆ ಕಾರ್ಯ ಇದೀಗ ಅಂತಿಮಗೊಂಡಿದೆ. ಮೊದಲು ಕಂದಾಯ ಇಲಾಖೆಯ ದಾಖಲೆಗಳನ್ನು ಸಂಪೂರ್ಣವಾಗಿ ಬಳ್ಳಾರಿ ಜಿಲ್ಲೆಗೆ ವರ್ಗಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News