ವಿಶ್ವ ಹವ್ಯಕ ಸಮ್ಮೇಳನಕ್ಕೆ ಬಹಿಷ್ಕಾರ: ಹವ್ಯಕ ಒಕ್ಕೂಟ
ಬೆಂಗಳೂರು, ಡಿ.26: ಅತ್ಯಾಚಾರದ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಭಾರತೀ ಸ್ವಾಮಿ ನೇತೃತ್ವದಲ್ಲಿ ಡಿ.28 ರಿಂದ ನಡೆಯುತ್ತಿರುವ ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವ ಹಾಗೂ ವಿಶ್ವ ಹವ್ಯಕ ಸಮ್ಮೇಳನವನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಅಖಿಲ ಹವ್ಯಕ ಒಕ್ಕೂಟ ಹೇಳಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಸ್ಥಾಪಕ ಕಾರ್ಯದರ್ಶಿ ಸಿ.ಎಚ್.ಎಸ್.ಭಟ್, ಅನೈತಿಕ, ಅಧಾರ್ಮಿಕ ದಾರಿಯಲ್ಲಿ ನಡೆಯುತ್ತಿರುವ ರಾಘವೇಶ್ವರ ಸ್ವಾಮೀಜಿ ನಿರ್ದೇಶನದಂತೆ ಮೂರು ದಿನಗಳ ಕಾರ್ಯಕ್ರಮ ನಡೆಯುತ್ತಿದೆ. ಇದು ಹವ್ಯಕ ಮಹಾಸಭಾ ಕಾರ್ಯಕ್ರಮದ ಬದಲಿಗೆ ರಾಮಚಂದ್ರಾಪುರ ಮಠದ ಕಾರ್ಯಕ್ರಮದಂತಾಗಿದೆ ಎಂದು ದೂರಿದರು.
ರಾಘವೇಶ್ವರ ಭಾರತೀ ಸ್ವಾಮೀಜಿ ತಾವು ಮಾಡಿದ ತಪ್ಪುಗಳನ್ನು ಮುಚ್ಚಿ ಹಾಕಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ಅಲ್ಲದೆ, ಹವ್ಯಕ ಮಹಾಸಭಾವು ಸ್ವಾಮಿಯ ಮೇಲಿನ ಯಾವುದೇ ಆರೋಪಗಳನ್ನು ಪ್ರಶ್ನಿಸದೆ ನೇರವಾಗಿ ಅವರ ಬೆಂಬಲಕ್ಕೆ ನಿಂತಿದೆ. ಹೀಗಾಗಿ, ಹವ್ಯಕ ಸಮುದಾಯದ ಯಾರೊಬ್ಬರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಮನವಿ ಮಾಡಿದರು.
ಹವ್ಯಕ ಮಹಾಸಭಾದ ಸಮ್ಮೇಳನದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿಯ ಹಿಂಬಾಲಕರಿಗೆ ಅಷ್ಟೇ ಗೌರವಿಸಲಾಗುತ್ತಿದೆ. ಆದರೆ, ಸಮುದಾಯದಲ್ಲಿ ಪದ್ಮಶ್ರೀ ಪಡೆದವರಲ್ಲಿ ಒಬ್ಬರಾದ ಚ.ಮೂ.ಕೃಷ್ಣಶಾಸ್ತ್ರಿಯನ್ನು, ತಪ್ಪು ಮಾಡಿದ ಸ್ವಾಮೀಜಿಯನ್ನು ಟೀಕೆ ಮಾಡಿದ ಕಾರಣಕ್ಕಾಗಿ ಗೌರವಿಸದೇ ದೂರವಿಟ್ಟಿದ್ದಾರೆ. ಆದುದರಿಂದಾಗಿ ಒಕ್ಕೂಟದಿಂದ ಸಮ್ಮೇಳನವನ್ನು ಬಹಿಷ್ಕರಿಸಲಾಗುತ್ತಿದೆ. ಹೀಗಾಗಿ, ಯಾರೂ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಂ.ಎನ್.ಭಟ್, ಹವ್ಯಕ ಮಹಾಸಭಾದ ಮಾಜಿ ಅಧ್ಯಕ್ಷ ಯು.ಎನ್.ಭಟ್, ಕಾರ್ಯದರ್ಶಿ ತಾರಾನಾಥ್ ಉಪಸ್ಥಿತರಿದ್ದರು.