ಸಾರ್ವಜನಿಕರ ಸಲಹೆಗಳ ಅನುಷ್ಠಾನಕ್ಕೆ ನಗರಸಭೆ ಬದ್ಧ: ಆಯುಕ್ತೆ ತುಷಾರಮಣಿ

Update: 2018-12-26 17:50 GMT

ಚಿಕ್ಕಮಗಳೂರು, ಡಿ.26: ನಗರಸಭೆಯ ವತಿಯಿಂದ ನಡೆದ ಈ ಹಿಂದಿನ ವರ್ಷದ ಬಜೆಟ್ ಪೂರ್ವ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಸ್ವೀಕರಿಸಿ ಭಾಗಶಃ ಅನುಷ್ಠಾನಗೊಳಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ತುಷಾರಮಣಿ ಹೇಳಿದರು.

ನಗರಸಭೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಬಜೆಟ್ ಪೂರ್ವ ಸಾರ್ವಜನಿಕ ಸಹಭಾಗಿತ್ವದ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸಭೆಯಲ್ಲಿ ಒಳಚರಂಡಿ ವ್ಯವಸ್ಥೆಗೆ ಶುಲ್ಕ ವಿಧಿಸುವಂತೆ ಸಲಹೆ ನೀಡಲಾಗಿತ್ತು. ಅದರಂತೆ ಒಳಚರಂಡಿ ಕಾಮಗಾರಿ ಪೂರ್ಣಗೊಂಡ ನಂತರ ಶುಲ್ಕ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಹಿಂದೂ ಮುಸಾಫೀರ್ ಖಾನೆ ಛತ್ರದ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ, ಹಳೆ ಮಾರುಕಟ್ಟೆ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣದ ಸಲಹೆಗಳಿಗೂ ಮನ್ನಣೆ ನೀಡಲಾಗಿದೆ ಎಂದರು. ಪ್ಲಾಸ್ಟಿಕ್ ಮುಕ್ತಗೊಳಿಸುವ ಸಲಹೆಯನ್ನಾಧರಿಸಿ ನಗರದ ವಿವಿಧ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಅಕ್ರಮ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರೊಂದಿಗೆ 70 ಸಾವಿರಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು.

ಪಾಲಿಟೆಕ್ನಿಕ್ ಕಾಲೇಜ್‍ನ ಹಿಂದೆ ಇರುವ ಕಾಲುವೆ ಸ್ವಚ್ಛಗೊಳಿಸುವಂತೆ ಬಂದ ಸಲಹೆಯಂತೆ ಆ ಕಾಲುವೆಯನ್ನು ಅಮೃತ್‍ ಯೋಜನೆಯಡಿ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ ತುಷಾರಮಣಿ ಹಿರೇಕೊಳಲೆ ಕೆರೆ ಹೂಳೆತ್ತುವುದು ಮತ್ತು ವಿಸ್ತರಣಾ ಕಾಮಗಾರಿ ಬೇಸಿಗೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು. ನಗರದಲ್ಲಿರುವ ಆಸ್ತಿಗಳ ಪೈಕಿ 8 ಸಾವಿರ ಆಸ್ತಿಗಳ ಖಾತೆಗಳು ಇ-ಖಾತೆ ವ್ಯಾಪ್ತಿಗೆ ಒಳಪಟ್ಟಿದ್ದು, ಉಳಿದಿರುವ ಆಸ್ತಿ ಮಾಲಕರು ಇ-ಖಾತಾ ವ್ಯಾಪ್ತಿಗೆ ಒಳಪಡಿಸಬೇಕೆಂದು ಮನವಿ ಮಾಡಿಕೊಂಡರು.

ಬಿಎಸ್ಪಿ ಮುಖಂಡ ರಾಧಾಕೃಷ್ಣ ಮಾತನಾಡಿ, ನಗರದ ಬೇಲೂರು ರಸ್ತೆಯಲ್ಲಿ ಹಲವು ಕಲ್ಯಾಣ ಮಂಟಪಗಳು ಆರಂಭವಾಗಿದ್ದು, ಅಲ್ಲಿ ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೂ ನಗರಸಭೆ ಕಟ್ಟಡ ಪರವಾನಗಿ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನಗರಸಭೆ ನಿರ್ಲಕ್ಷ್ಯಧೋರಣೆಗೆ ಕಾರಣವೇನು ಎಂದು ಪ್ರಶ್ನಿಸಿದರು.

ಹೋರಾಟಗಾರ ನಂಜುಂಡರಾವ್ ಮಾತನಾಡಿ, ನಗರಸಭೆಯ ಸಮಸ್ಯೆಯ ಬಗೆಹರಿಸುವ ನಿಟ್ಟಿನಲ್ಲಿ ಪ್ರತೀ ವಾರ್ಡ್‍ನಲ್ಲಿಯೂ ಸಾರ್ವಜನಿಕರ ಸಭೆ ಕರೆಯಬೇಕೆಂದು ಆಗ್ರಹಿಸಿದರು. ಆನಂದ ಕೃಷ್ಣ ಎಂಬವರು ಮಾತನಾಡಿ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ನಗರಸಭಾ ವತಿಯಿಂದ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಗಳಲ್ಲಿ ಶೌಚಾಲಯ ನಿರ್ಮಾಣ, ಎಬಿಸಿ ಮತ್ತು ಕೆ.ಎಂ ರಸ್ತೆಯಲ್ಲಿರುವ ರಸ್ತೆ ಗುಂಡಿಗಳಿಗೆ ಶಾಶ್ವತ ಪರಿಹಾರ, ಉದ್ಯಾನಗಳ ಅಭಿವೃದ್ದಿ ಬಗ್ಗೆ ಗಮನ ಸೆಳೆದರು.

ಶಂಕರಪುರದ ಚನ್ನಕೇಶವ ಮಾತನಾಡಿ, ಲಕ್ಷ್ಮೀಶ ನಗರದಲ್ಲಿರುವ ಉದ್ಯಾನವನ ಗಿಡಗಂಟಿಗಳಿಂದ ತುಂಬಿದ್ದು, ಹಂದಿ, ಬೀದಿನಾಯಿಗಳ ಆವಾಸ ಸ್ಥಾನವಾಗಿದೆ, ಸಮುದಾಯ ಭವನ ಶಿಥಿಲಗೊಂಡಿದೆ, ಶೌಚಾಲಯವಿಲ್ಲ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡರು.

ನಗರಸಭೆ ಸದಸ್ಯ ರಾಜಶೇಖರ್ ಮಾತನಾಡಿ, ನಗರ ಪ್ರವೇಶಿಸುವ 4 ದಿಕ್ಕುಗಳಲ್ಲಿಯೂ ನಗರ ಸೌಂದರ್ಯೀಕರಣಕ್ಕೆ ಮುಂಬರುವ ಬಜೆಟ್‍ನಲ್ಲಿ ಅವಕಾಶ ಕಲ್ಪಿಸಬೇಕೆಂದರು. 

ನಾಯಿಗಳ ಕಾಟಕ್ಕೆ ನಗರಸಭೆ ಅಸಹಾಯಕತೆ: ಇಂದು ನಡೆದ ಬಜೆಟ್‍ಪೂರ್ವ ಸಭೆಯಲ್ಲಿ ನಾಯಿ ಕಾಟ ತಪ್ಪಿಸುವಂತೆ ಸಾರ್ವಜನಿಕರಿಂದ ಬಂದ ಖಡಕ್ ಪ್ರಶ್ನೆಗಳಿಗೆ ಪೌರಾಯುಕ್ತೆ ತುಷಾರಮಣಿ ತಮ್ಮ ಸಂಕಟಗಳನ್ನು ತೊಡಿಕೊಂಡರು. ಸರಕಾರದ ಆದೇಶದ ಪ್ರಕಾರ ನಾಯಿ ಮತ್ತು ಹಂದಿಗಳನ್ನು ಕೊಲ್ಲಬೇಕೆಂದಿದ್ದರೂ ಇನ್ನೊಂದು ಕಾನೂನಿನ ಪ್ರಕಾರ ಕೊಲ್ಲುವ ಬದಲು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿರುವುದರಿಂದ ನಾವು ಅಡಕತ್ತರಿಗೆ ಸಿಲುಕಿದ್ದೇವೆ ಎಂದರು.

ಸರಕಾರಿ ಆಸ್ಪತ್ರೆಗಳಲ್ಲಿ ಮನುಷ್ಯನ ಶಸ್ತ್ರ ಚಿಕಿತ್ಸೆ ಉಚಿತವಾಗಿದ್ದರೂ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ 1,500 ರೂ. ವೆಚ್ಚ ತಗಲುತ್ತಿದೆ. ಹಣ ನೀಡಿದರೂ ವೈದ್ಯರ ಕೊರತೆಯಿದೆ, ಶಸ್ತ್ರ ಚಿಕಿತ್ಸಾ ನಂತರ ಅವುಗಳ ನಿರ್ವಹಣೆಗೆ ಅಗತ್ಯವಿರುವ ಪರಿಕರಗಳು ಲಭ್ಯವಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜನಸಾಮಾನ್ಯರು ಮತ್ತು ಸಂಘಸಂಸ್ಥೆಗಳು ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಮುಂದಾಗಬೇಕು ಎಂದು ಹೇಳಿದರು. 

ಈ ವೇದಿಕೆಯಲ್ಲಿ ಅಧ್ಯಕ್ಷೆ ಶಿಲ್ಪಾರಾಜಶೇಖರ್, ಉಪಾಧ್ಯಕ್ಷ ಸುಧೀರ್ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News