ನ್ಯಾಯ ನಿರಾಕರಣೆಗೆ ನಡೆದ ಸಂಚು

Update: 2018-12-27 06:13 GMT

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಜೆಡಿಎಸ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಆವೇಶದಲ್ಲಿ ಆಡಿದ ಮಾತಿನ ಬಗ್ಗೆ ಬಿಜೆಪಿ ನಾಯಕರು ವಿವಾದ ಉಂಟು ಮಾಡಿದ್ದಾರೆ. ಹಂತಕರನ್ನು ಶೂಟ್ ಮಾಡಬೇಕೆಂದು ಕುಮಾರಸ್ವಾಮಿ ತಮಗೆ ಸುದ್ದಿ ತಿಳಿಸಿದ ಪೊಲೀಸ್ ಅಧಿಕಾರಿಗೆ ಸಿಟ್ಟಿನಲ್ಲಿ ಹೇಳಿದ್ದರು. ಈ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಬಿಜೆಪಿ ನಾಯಕ ಯಡಿಯೂರಪ್ಪ ಕುಮಾರಸ್ವಾಮಿಯವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹೊರಟಿದ್ದಾರೆ. ಆದರೆ ಬಿಜೆಪಿ ನಾಯಕರು ಮೊದಲು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮುಖಕ್ಕೆ ಕನ್ನಡಿ ಹಿಡಿಯಲಿ.

 2005ರಲ್ಲಿ ನಡೆದ ಸೊಹ್ರಾಬುದ್ದೀನ್ ಶೇಕ್ ಮತ್ತು ಅವರ ಪತ್ನಿ ಕೌಸರ್‌ಬಿ ಹಾಗೂ ಪ್ರತ್ಯಕ್ಷ ಸಾಕ್ಷಿ ತುಳಸಿರಾಮ ಪ್ರಜಾಪತಿ ಎನ್‌ಕೌಂಟರ್ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಹಾಗೂ 22 ಆರೋಪಿಗಳು ಹೇಗೆ ದೋಷಮುಕ್ತರಾದರೆಂಬುದು ಗಮನಾರ್ಹ ಸಂಗತಿಯಾಗಿದೆ. ಹದಿಮೂರು ವರ್ಷಗಳ ಹಿಂದಿನ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ನಡೆದ ವಿಚಾರಣೆ ಸಂದೇಹಾಸ್ಪದವಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್. ಜೆ. ಶರ್ಮಾ ಅವರೇ ಆರೋಪ ಸಾಬೀತುಪಡಿಸಲು ವಿಫಲವಾದ ಸಿಬಿಐ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ 210 ಸಾಕ್ಷಿಗಳ ಪೈಕಿ 92 ಮಂದಿ ಪ್ರತಿಕೂಲ ಸಾಕ್ಷ ನುಡಿದಿದ್ದಾರೆ. ‘‘ಮೂರು ಜೀವಗಳು ಬಲಿಯಾಗಿರುವುದು ನಿಜ. ಆದರೆ ನ್ಯಾಯಾಲಯಕ್ಕೆ ಬೇಕಾಗಿರುವುದು ಸಾಕ್ಷಿಗಳು. ಸೊಹ್ರಾಬುದ್ದೀನ್ ಮತ್ತು ತುಳಸಿರಾಮ ಪ್ರಜಾಪತಿ ಕುಟುಂಬಕ್ಕೆ ನಾನು ಸಾಂತ್ವನ ಹೇಳುತ್ತೇನೆ’’ ಎಂದು ನ್ಯಾಯಾಧೀಶ ಎಸ್. ಜೆ. ಶರ್ಮಾ ಆಡಿದ ಮಾತಿನಲ್ಲೇ ಅಸಹಾಯಕತೆ ಎದ್ದು ಕಾಣುತ್ತದೆ.

ಸೊಹ್ರಾಬುದ್ದೀನ್ ಎನ್‌ಕೌಂಟರ್ ಮತ್ತು ಅವರ ಪತ್ನಿ ಕೌಸರ್‌ಬಿ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಮತ್ತು ಪ್ರಜಾಪತಿ ಎನ್‌ಕೌಂಟರ್ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಾಶ ಮಾಡಿರುವುದು, ತನಿಖೆಯ ವಿಧಿ ವಿಧಾನಗಳನ್ನು ಗಾಳಿಗೆ ತೂರಿರುವುದು, ಆ ಮೂಲಕ ನ್ಯಾಯಾಂಗ ಪ್ರಕ್ರಿಯೆಗೆ ತೊಂದರೆ ಉಂಟು ಮಾಡಿರುವುದು ಸ್ಪಷ್ಟವಾಗುತ್ತದೆ. ಈ ಅಭಿಪ್ರಾಯವನ್ನು ನ್ಯಾಯಾಧೀಶರೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಿಬಿಐ, ಪೊಲೀಸರ ಶಾಮೀಲಿನೊಂದಿಗೆ ಈ ಪ್ರಕರಣದ ತೀರ್ಪು ಆರೋಪಿಗಳನ್ನು ದೋಷಮುಕ್ತರನ್ನಾಗಿ ಮಾಡುವಂತೆ ನ್ಯಾಯಾಧೀಶರನ್ನು ಅಸಹಾಯಕ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ.

 ಸೊಹ್ರಾಬುದ್ದೀನ್ ಎನ್‌ಕೌಂಟರ್ ನಡೆದಾಗ ಅಮಿತ್ ಶಾ ಗುಜರಾತ್‌ನ ಸಹಾಯಕ ಗೃಹಸಚಿವರಾಗಿದ್ದರು. ಈ ಪ್ರಕರಣದಲ್ಲಿ ಅಮಿತ್ ಶಾ ಸೇರಿದಂತೆ 38 ಮಂದಿ ಆರೋಪಿ ಸ್ಥಾನದಲ್ಲಿ ನಿಂತಿದ್ದರು. ಈ ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಸೂಚಿಸಿತ್ತು. ಸಿಬಿಐ 38 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿ ಜೈಲಿಗೆ ತಳ್ಳಲಾಗಿತ್ತು. ಆದರೆ ತನಿಖೆ ನಡೆಯುವ ಮೊದಲೇ ಅಮಿತ್ ಶಾ ಮತ್ತು ವಂಝಾರಾ ಸೇರಿ 16 ಮಂದಿಯನ್ನು ದೋಷಮುಕ್ತರನ್ನಾಗಿ ಮಾಡಲಾಯಿತು. ಗುಜರಾತ್‌ನಲ್ಲಿ ವಿಚಾರಣೆ ನಡೆಯುವುದು ಸುರಕ್ಷಿತವಲ್ಲ ಎಂದು ಮುಂಬೈಗೆ ಸಿಬಿಐ ನ್ಯಾಯಾಲಯವನ್ನು ಸ್ಥಳಾಂತರಿಸಲಾಗಿತ್ತು. ಈ ವಿಚಾರಣೆ ವೇಳೆ ಅಮಿತ್ ಶಾ ಪದೇ ಪದೇ ಗೈರು ಹಾಜರಾದರು. 2014ರ ಜೂನ್ 26ರಂದು ಅಮಿತ್ ಶಾ ನ್ಯಾಯಾಲಯದಲ್ಲಿ ಹಾಜರಿರಬೇಕೆಂದು ಮುಂಬೈನ ಸಿಬಿಐನ ವಿಶೇಷ ನ್ಯಾಯಾಧೀಶರಾಗಿದ್ದ ಜೆ.ಟಿ. ಉತ್ಪತ್ ಆದೇಶ ಮಾಡಿದ್ದರು. ಆದರೆ ಜೂನ್ 25ರಂದು ಅವರನ್ನು ಪುಣೆ ನ್ಯಾಯಾಲಯಕ್ಕೆ ದಿಢೀರನೆ ವರ್ಗಾವಣೆ ಮಾಡಲಾಯಿತು. ನಂತರ ನ್ಯಾಯಾಧೀಶರಾಗಿ ಬಿ. ಎಚ್. ಲೋಯಾ ನೇಮಕಗೊಂಡರು. ಡಿಸೆಂಬರ್ 25ರಂದು ಅಮಿತ್ ಶಾ ನ್ಯಾಯಾಲಯದಲ್ಲಿ ಹಾಜರಿರಬೇಕೆಂದು ಕಟ್ಟುನಿಟ್ಟಾದ ಆದೇಶ ಹೊರಡಿಸಿದರು. ಆದರೆ ಡಿಸೆಂಬರ್ 1ರಂದು ನಾಗಪುರದಲ್ಲಿ ನ್ಯಾಯಾಧೀಶ ಲೋಯಾ ಅವರ ಸಂಶಯಾಸ್ಪದ ಸಾವು ಸಂಭವಿಸಿತು. ಡಿಸೆಂಬರ್ 15ರಂದು ನೂತನ ನ್ಯಾಯಾಧೀಶರ ನೇಮಕವಾಯಿತು. ಡಿಸೆಂಬರ್ 17ಕ್ಕೆ ವಿಚಾರಣೆ ನಡೆದು ಡಿಸೆಂಬರ್ 30ರಂದು ತೀರ್ಪು ಹೊರಬಂತು. ಅಮಿತ್ ಶಾ ಸೇರಿ 16 ಮಂದಿಯನ್ನು ಖುಲಾಸೆ ಮಾಡಲಾಗಿತ್ತು.

ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಗುಜರಾತ್ ಪೊಲೀಸರು ಸರಿಯಾಗಿ ತನಿಖೆ ನಡೆಸಲಿಲ್ಲ. ಸಿಬಿಐ ಮಧ್ಯಪ್ರವೇಶದ ನಂತರವೂ ಉದ್ದೇಶಪೂರ್ವಕವಾಗಿ ಸಾಕ್ಷ್ಯಾಧಾರಗಳನ್ನು ನಾಶ ಮಾಡಲಾಯಿತು. ಪ್ರಕರಣದ ವಿಚಾರಣೆಗೆ ಅತ್ಯಗತ್ಯವಾಗಿ ಬೇಕಾಗಿದ್ದ ಅಮಿತ್ ಶಾ ಮತ್ತು ಹಿರಿಯ ಪೊಲೀಸ್ ಅಧಿಕಾರಿ ವಂಝಾರಾ ನಡುವೆ ನಡೆದಿದೆಯೆನ್ನಲಾದ ದೂರವಾಣಿ ಸಂಭಾಷಣೆಯ ದಾಖಲೆಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ನಡುವಿನ ಸಂಭಾಷಣೆಯ ದಾಖಲೆಗಳನ್ನು ನಾಪತ್ತೆ ಮಾಡಲಾಯಿತು. ಇಲ್ಲವೇ ನಾಶ ಮಾಡಲಾಯಿತು. ಈ ನಡುವೆ 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆ ನಂತರ ಸಿಬಿಐ ಈ ಪ್ರಕರಣದ ಬಗ್ಗೆ ಆಸಕ್ತಿ ಕಳೆದುಕೊಂಡಿತು. ಈ ಪ್ರಕರಣದಲ್ಲಿ ಅಮಿತ್ ಶಾರನ್ನು ದೋಷಮುಕ್ತರನ್ನಾಗಿ ಮಾಡಿದ ಬಗ್ಗೆ ಸಿಬಿಐ ಮೇಲ್ಮನವಿ ಸಲ್ಲಿಸಲಿಲ್ಲ, ಸಾಕ್ಷಿಗಳಿಗೆ ಯಾವ ರಕ್ಷಣೆಯನ್ನೂ ಒದಗಿಸಲಿಲ್ಲ. ಪ್ರಭಾವಿ ರಾಜಕೀಯ ವ್ಯಕ್ತಿಯ ಎದುರು ವ್ಯವಸ್ಥೆ ಅಸಹಾಯಕವಾಯಿತು. ‘‘ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಮತ್ತು ತುಳಸಿರಾಮ ಪ್ರಜಾಪತಿಯನ್ನು ಎನ್‌ಕೌಂಟರ್ ಮಾಡಿ ಸಾಯಿಸದಿದ್ದರೆ, ನರೇಂದ್ರ ಮೋದಿ ಅವರ ಜೀವಕ್ಕೆ ಅಪಾಯವಿತ್ತು’’ ಎಂದು ಮಾಜಿ ಡಿಐಜಿ ಡಿ.ಜಿ. ವಂಝಾರಾ ಬಹಿರಂಗವಾಗಿ ಹೇಳುತ್ತಿದ್ದಾರೆ. ಇದು ನಮ್ಮ ದೇಶದ ಇಂದಿನ ಕಾನೂನು ವ್ಯವಸ್ಥೆ.

ಗುಜರಾತ್‌ನಲ್ಲಿ ಇಂಥ ಎನ್‌ಕೌಂಟರ್ ಸಾವುಗಳು ಮಾತ್ರವಲ್ಲ ಅನೇಕ ಸಂಶಯಾಸ್ಪದ ಸಾವುಗಳ ದೊಡ್ಡ ಕರ್ಮಕಾಂಡವೇ ಇದೆ. ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಹರೇನ್ ಪಾಂಡೆ ಅವರನ್ನು ಬೆಳಗಿನ ಜಾವ ಗುಂಡಿಕ್ಕಿ ಕೊಲ್ಲಲಾಯಿತು. ಈ ಹರೇನ್ ಪಾಂಡೆಗೆ ಗುಜರಾತ್ ಹತ್ಯಾಕಾಂಡದ ವಿವರಗಳೆಲ್ಲ ಗೊತ್ತಿದ್ದವೆನ್ನಲಾಗುತ್ತಿದೆ. ಇಂಥ ಪಾಂಡೆ ನಿಗೂಢ ವ್ಯಕ್ತಿಗಳ ಬಂದೂಕಿಗೆ ಬಲಿಯಾದರು. ಅಪರಾಧವೇ ಅಧಿಕಾರದ ಸಿಂಹಾಸನ ಏರಿ ಕೂತಾಗ ಇಂಥ ದುರಂತಗಳು ಸಂಭವಿಸುತ್ತವೆ. ಈಗ ಕೇಂದ್ರದ ಅಧಿಕಾರ ಸೂತ್ರ ಹಿಡಿದವರು ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯನ್ನೇ ನಾಶ ಮಾಡಿದ್ದಾರೆ. ತಮ್ಮ ದುರಾಡಳಿತ ವಿರೋಧಿಸುವವರನ್ನೆಲ್ಲ ರಾಜದ್ರೋಹದ ಸುಳ್ಳು ಆರೋಪದ ಮೇಲೆ ಜೈಲಿಗೆ ತಳ್ಳಿದ್ದಾರೆ. ಇದು ನಮ್ಮ ದೇಶದ ಇಂದಿನ ಆಡಳಿತ ವ್ಯವಸ್ಥೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News