ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಮಂಡ್ಯ, ಡಿ.27: ಡಿ.24 ರಂದು ಮದ್ದೂರಿನಲ್ಲಿ ನಡೆದ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಗ್ರಾಮದ ಪ್ರಕಾಶ್ ಹತ್ಯೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ದೂರು ತಾಲೂಕು ತೊಪ್ಪನಹಳ್ಳಿ ಗ್ರಾಮದ ಟಿ.ಎಸ್.ಪ್ರಸನ್ನ, ಯೋಗೇಶ್ ಅಲಿಯಾಸ್ ತಮಟೆ, ಮುತ್ತೇಶ್ ಹಾಗೂ ಮದ್ದೂರಿನ ಸ್ವಾಮಿ.ಡಿ ಬಂಧಿತರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, 'ಆರೋಪಿಗಳನ್ನು ಆಂಧ್ರಪ್ರದೇಶದ ಕಡಪದಲ್ಲಿ ಬಂಧಿಸಲಾಗಿದೆ. ಜ.3ರವರೆಗೆ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ' ಎಂದರು.
ಪ್ರಕಾಶ್ ಹತ್ಯೆ ಸಂಬಂಧಿ ಅಭಿಲಾಷ್ ಎಂಬುವರು ನೀಡಿದ್ದ ದೂರಿನ ಅನ್ವಯ ಬಂಧಿತರು ಸೇರಿದಂತೆ ಶಿವರಾಜ, ಹೇಮಂತ್ ಹಾಗೂ ಯೋಗೇಶ ಅವರ ಮೇಲೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 143, 146, 148, 341, 307, 302, 120ಬಿ, 114ರೆ/ವಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಪ್ರಕಾಶ್ ಅವರ ಹತ್ಯೆಗೆ 2016ರ ಡಿ.25ರಲ್ಲಿ ತೊಪ್ಪನಹಳ್ಳಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಹಿನ್ನಲೆಯ ವೈಷಮ್ಯ ಇರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹತ್ಯೆ ಹಿಂದಿರುವ ವ್ಯಕ್ತಿಗಳ ಬಗ್ಗೆ ತನಿಖೆ ನಡೆಲಾಗುತ್ತಿದೆ ಎಂದು ಅವರು ತಿಳಿಸಿದರು. ತೊಪ್ಪನಹಳ್ಳಿ ಗ್ರಾಮದ ಜೋಡಿ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಈಗಾಗಲೇ ರೌಡಿಶೀಟರ್ ತೆರೆಯಲಾಗಿದೆ. ಜಿಲ್ಲೆಯಿಂದ ಗಡಿಪಾರು ಮಾಡುವ ಕುರಿತು ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದರು.
ಮುನ್ನೆಚ್ಚರಿಕೆಯಾಗಿ ತೊಪ್ಪನಹಳ್ಳಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಮದ್ದೂರು ಪಟ್ಟಣದಲ್ಲಿ ಕೆಲ ಗಣ್ಯರಿಗೆ ಹಾಗೂ ಘಟನೆ ಸಂಬಂಧಪಟ್ಟ ವ್ಯಕ್ತಿಗಳ ಮನೆಗಳಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ ಎಂದರು. ಹೊಸ ವರ್ಷ ಅಚರಣೆ ಸಂಬಂಧ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಿ ಗಸ್ತು ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ ಬಲರಾಮೇಗೌಡ ಹಾಗೂ ಮಳವಳ್ಳಿ ಉಪ ವಿಭಾಗ ಡಿವೈಎಸ್ಪಿ ಶೈಲೇಂದ್ರ ಉಪಸ್ಥಿತರಿದ್ದರು.