ಸಿದ್ದರಾಮಯ್ಯರಿಗೆ ಸರಕಾರ ನಡೆಯಬಾರದೆಂಬ ಉದ್ದೇಶವಿದ್ದಂತಿದೆ: ಬಸವರಾಜ ಹೊರಟ್ಟಿ

Update: 2018-12-27 15:59 GMT

ಹುಬ್ಬಳ್ಳಿ, ಡಿ. 27: ‘ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈತ್ರಿ ಸರಕಾರ ನಡೆಯಬಾರದು ಎಂಬ ಉದ್ದೇಶ ಇರುವಂತಿದೆ. ಇಂದಿಗೂ ಅವರೇ ಮುಖ್ಯಮಂತ್ರಿ ಎನ್ನುವ ರೀತಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ’ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವರ್ತನೆ ಹೀಗೆಯೇ ಮುಂದುವರೆದರೆ ರಾಜ್ಯದಲ್ಲಿನ ಮೈತ್ರಿ ಸರಕಾರ ಬಹಳ ದಿನ ಮುಂದುವರೆಯುವುದು ಅನುಮಾನ ಎಂದು ಇದೇ ಸಂದರ್ಭದಲ್ಲಿ ಸಂಶಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ಮೈತ್ರಿ ಸರಕಾರ ಆಡಳಿತವಿದ್ದರೂ, ಕಾಂಗ್ರೆಸ್‌ನವರು ಅವರದ್ದೇ ಸರಕಾರ ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಜೆಡಿಎಸ್ ಬಗ್ಗೆ ಸ್ವಲ್ಪವೂ ಗೌರವ ಇದ್ದಂತಿಲ್ಲ. ಕಾಂಗ್ರೆಸ್ ವರ್ತನೆ ನೋಡಿ ಜೆಡಿಎಸ್ ವರಿಷ್ಠರು ಬೇಸತ್ತಿದ್ದಾರೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಸಿಎಂ ಕುಮಾರಸ್ವಾಮಿ ಹೊಂದಾಣಿಕೆಯಿಂದ ಮುಂದುವರಿಯಲು ಬಹಳ ಪ್ರಯತ್ನಿಸುತ್ತಿದ್ದಾರೆ. ಆದರೆ, ಅಧಿಕಾರ ನಡೆಸಲು ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಬಿಡುತ್ತಿಲ್ಲ. ಮೈತ್ರಿಗೆ ಮನಸ್ಸು ಇಲ್ಲವೆಂದರೆ ಏಕೆ ಕಾಂಗ್ರೆಸ್ ಸರಕಾರ ನಡೆಯಬೇಕು. ಒಪ್ಪಂದದ ರೀತಿ ಮೈತ್ರಿ ಸರಕಾರ ನಡೆಯಬೇಕು. ಇಲ್ಲವಾದರೆ ಸರಕಾರದ ಅಗತ್ಯವಿಲ್ಲ ಎಂದು ಹೊರಟ್ಟಿ ಖಾರವಾಗಿ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆ ಸಂದರ್ಭದಲ್ಲಿ ಯಾವುದೇ ಷರತ್ತು ಹಾಕಿರಲಿಲ್ಲ. ಆದರೆ, ಇದೀಗ ಹೊಸ ಷರತ್ತುಗಳನ್ನು ಹಾಕುತ್ತಿದ್ದು, ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಲ್ಲಿಯೂ ಕಾಂಗ್ರೆಸ್ ಪಕ್ಷದವರೆ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಹೊರಟ್ಟಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News