ಜನಾರ್ಧನ ರೆಡ್ಡಿ ವಿರುದ್ಧದ ಅಕ್ರಮ ಅದಿರು ಸಾಗಣೆ ಪ್ರಕರಣ: ಸಿಟಿ ಸಿವಿಲ್ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿ ಸಲ್ಲಿಕೆ
ಬೆಂಗಳೂರು, ಡಿ.27: ಬಳ್ಳಾರಿ ಜಿಲ್ಲೆಯ ಎನ್.ಶೇಖಸಾಬ್ ಗಣಿಯಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರನ್ನು ತೆಗೆದು ಖಾಸಗಿ ಸ್ಥಳಕ್ಕೆ ಅಕ್ರಮವಾಗಿ ಸಾಗಾಣಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ನಗರದ ಸಿಟಿ ಸಿವಿಲ್ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ.
ದೋಷಾರೋಪಣಾ ಪಟ್ಟಿಯಲ್ಲಿ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ, ದೇವಿ ಎಂಟರ್‌ಪ್ರೈಸಸ್‌ನ ಪಾಲುದಾರ ಕೆ.ಎಂ.ಆಲಿಖಾನ್, ಶ್ರೀ ಮಿನರಲ್ಸ್‌ನ ಪಾಲುದಾರ ಬಿ.ವಿ.ಶ್ರೀನಿವಾಸ್‌ರೆಡ್ಡಿ ಹೆಸರನ್ನು ಉಲ್ಲೇಖಿಸಲಾಗಿದೆ. ಜನಾರ್ದನರೆಡ್ಡಿ ಹಾಗೂ ಕೆ.ಎಂ.ಆಲಿಖಾನ್, 2009-2010ರಲ್ಲಿ ಎನ್.ಶೇಖಸಾಬ್ ಗಣಿಯಿಂದ ಅಕ್ರಮವಾಗಿ ಅದಿರನ್ನು ತೆಗೆದು ಪಾಪಿನಾಯಕನಹಳ್ಳಿಯಲ್ಲಿ ಸಂಗ್ರಹಿಸಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಅದಿರನ್ನು ವಶಕ್ಕೆ ಪಡೆದಿತ್ತು.
ಅಲ್ಲದೆ, ಆರೋಪಿಗಳ ವಿರುದ್ಧ ಲೋಕಾಯುಕ್ತ ವರದಿ ಮಾಹಿತಿ ಮೇರೆಗೆ ವಿಶೇಷ ತನಿಖಾ ತಂಡವು ಕಲಂ 379, 420, 120(ಬಿ), ರಾಜ್ಯ ಅರಣ್ಯ ಕಾಯ್ದೆ-1969 ಅಡಿಯಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಈ ತನಿಖೆ ಕೈಗೊಂಡ ವಿಶೇಷ ತನಿಖಾ ತಂಡವು ಗುರುವಾರ ಸಿಟಿ ಸಿವಿಲ್ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ. ಈ ಅಕ್ರಮ ಸಾಗಾಣಿಕೆ ಮತ್ತು ಮಾರಾಟದಿಂದ ಸರಕಾರದ ಬೊಕ್ಕಸಕ್ಕೆ 23,89,648 ರೂ. ನಷ್ಟವುಂಟಾಗಿದೆ ಎಂದು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.