ಕೊಪ್ಪ: ಕರ್ತವ್ಯ ನಿರತ ವೈದ್ಯರಿಗೆ ಹಲ್ಲೆ ಆರೋಪ; ವೈದ್ಯರಿಂದ ಪ್ರತಿಭಟನೆ

Update: 2018-12-27 16:57 GMT

ಕೊಪ್ಪ, ಡಿ.27: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯ ಸಿಬ್ಬಂದಿ ಮೇಲೆ 10-15 ಜನರ ತಂಡ ಹಲ್ಲೆ ನಡೆಸಿ ಕಾರಿನ ಕೀ ಕಸಿದು, ಮೊಬೈಲ್ ದೋಚಿದ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ ಎನ್ನಲಾಗಿದ್ದು, ಘಟನೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆಯ ಸದಸ್ಯರು ಹಾಗೂ ತಾಲೂಕು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಲಿಸಿದ್ದಾರೆ.

ಹಲ್ಲೆಗೊಳಗಾದ ವೈದ್ಯ ಡಾ.ನೀಲಕಂಠ ಠಾಣೆಗೆ ದೂರು ನೀಡಿದ್ದು ದೂರಿನಲ್ಲಿ ಮಂಗಳವಾರ ಮಧ್ಯರಾತ್ರಿ ಕಾಪುವಿನ ಆಸೀಫ್ ಎಂಬಾತನನ್ನು ಆತನ ಸಂಬಂಧಿಕರು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದಿದ್ದು, ತಾನು ಚಿಕಿತ್ಸೆ ನೀಡುತ್ತಿದ್ದಾಗ ಆಸೀಫ್‍ನನ್ನು ಕರೆತಂದಿದ್ದ ಕೆಲವು ಯುವಕರು ನನಗೆ ಅನಾವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ಹೀಯಾಳಿಸುತ್ತಿದ್ದರು. ಚಿಕಿತ್ಸೆ ಮುಗಿಸಿ ಆಸ್ಪತ್ರೆಯ ಹೊರ ಆವರಣಕ್ಕೆ ಬಂದಾಗ ನವಾಝ್, ಅನಿಲ್ ಡಿಸೋಜ ಮತ್ತಿತರರ ಗುಂಪು ಏಕಾಏಕಿ ನನ್ನ ಹಾಗೂ ಆ್ಯಂಬುಲೆನ್ಸ್ ಚಾಲಕ ಪ್ರಭಾಕರ ಎಂಬವರ ಮೇಲೆ ಹೆಲ್ಮೆಟ್‍ನಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ನನ್ನ ಕಾರಿನ ಬೀಗದ ಕೀ ಮತ್ತು ಮೊಬೈಲನ್ನು ದೋಚಿದ್ದಾರೆ. ಈ ಸಂದರ್ಭ ಆಸ್ಪತ್ರೆಯ ಸಿಬ್ಬಂದಿಗಳು ಹಲ್ಲೆಕೋರರಿಂದ ನಮ್ಮನ್ನು ಬಿಡಿಸಿ ರಕ್ಷಣೆ ನೀಡಿದ್ದಾರೆ. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರು ಸ್ವೀಕರಿಸಿರುವ ಕೊಪ್ಪ ಪಿಎಸ್ಸೈ ಪುಟ್ಟೇಗೌಡ ಭಾರತೀಯ ವೈದ್ಯಕೀಯ ಕಾಯ್ದೆಯಡಿ ತಾಲೂಕಿನ ಗುಣವಂತೆ ನಿವಾಸಿ ನವಾಝ್ ಮತ್ತು ಅನಿಲ್ ಡಿಸೋಜ ಮತ್ತಿತರರ ಮೇಲೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. 

ಹಲ್ಲೆ ಘಟನೆ ಖಂಡಿಸಿ ಬೆಳಗ್ಗೆ ಆಸ್ಪತ್ರೆಯೆದುರು ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಾ.ರಾಮಚಂದ್ರ ಮಾತನಾಡಿ, ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ವೈದ್ಯರು ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. 3 ವರ್ಷಗಳ ಹಿಂದೆ ಬಾಳೆಹೊನ್ನೂರಿನಲ್ಲಿ ಇದೇ ರೀತಿ ಘಟನೆ ನಡೆದಾಗ ಅಲ್ಲಿನ ವೈದ್ಯರು ರಾತ್ರಿ 8ರ ಮೇಲೆ ವ್ಯದ್ಯಕೀಯ ಸೇವೆ ನಿಲ್ಲಿಸಿದ್ದಾರೆ. ಆಸ್ಪತ್ರೆಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದರು.

ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಮಾತನಾಡಿ, ಮಧ್ಯರಾತ್ರಿಯಲ್ಲಿ ಚಿಕಿತ್ಸೆಗೆ ಬಂದ ಆಸೀಫ್‍ಗೆ ಸರಿಯಾದ ರೀತಿಯಲ್ಲಿ ಡಾ.ನೀಲಂಠರವರು ಚಿಕಿತ್ಸೆ ನೀಡಿದ್ದಾರೆ. ಆದರೂ ಹಲ್ಲೆ ಮಾಡಿದ್ದು ಖಂಡನೀಯ, ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳಿರುವುದರಿಂದ ಆಗಾಗ್ಗೆ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆಯುತ್ತಿರುತ್ತವೆ. ಪೊಲೀಸ್ ರಕ್ಷಣೆ ಬೇಕೆಂದು ಹಲವು ಬಾರಿ ಠಾಣೆಗೆ ತಿಳಿಸಿದ್ದೇವೆ. ಪಕ್ಕದಲ್ಲೇ ಪೊಲೀಸ್ ಠಾಣೆ ಇರುವುದರಿಂದ ಪೊಲೀಸ್ ನಿಯೋಜನೆ ಬೇಡ ಎಂದು ತಿಳಿಸಿದ್ದರು. ಕಡೂರು ತಾಲೂಕು ಆಸ್ಪತ್ರೆಗೆ ಪೊಲೀಸ್ ನಿಯೋಜನೆ ಮಾಡಿದ್ದಾರೆ. ಅದೇ ರೀತಿ ಇಲ್ಲಿಗೂ ಪೊಲೀಸರ ಆವಶ್ಯಕತೆ ಇದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ರಾಮಸ್ವಾಮಿ ಮಾತನಾಡಿ, ದಿನದ 24 ಗಂಟೆ ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವ ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಪೊಲೀಸ್ ಇಲಾಖೆ ತಕ್ಷಣ ಪ್ರಕರಣ ದಾಖಲಿಸಿ ಅರೋಪಿಗಳನ್ನು ಪತ್ತೆಹಚ್ಚಿ ಕಾನೂನಿನಡಿ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದರು. 

ಪ್ರತಿಭಟನೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಡಾ.ಉದಯಶಂಕರ್, ಡಾ.ಮೋಹನ್ ಬಿ. ಶೆಟ್ಟಿ, ಡಾ.ರವೀಶ್ ಪೈ, ಡಾ.ಶ್ಯಾನುಬೋಗ್, ಡಾ.ಅಮರಶೇಖರ್, ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಂತಿ ನಾಗರಾಜ್, ಸದಸ್ಯರಾದ ಉದಯ ಎನ್.ಕೆ. ಇಂದಿರಾ ಉಮೇಶ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಎ. ದಿವಾಕರ್, ಸದಸ್ಯ ಕೆ.ಎಸ್. ಸುಬ್ರಹ್ಮಣ್ಯ ಶೆಟ್ಟಿ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News