ಎಸಿಬಿ ದಾಳಿ: ಕರ್ತಿಕೆರೆ ಗ್ರಾಮ ಲೆಕ್ಕಾಧಿಕಾರಿ ಬಂಧನ

Update: 2018-12-27 16:59 GMT

ಚಿಕ್ಕಮಗಳೂರು, ಡಿ.27: ತಾಲೂಕಿನ ಕರ್ತಿಕೆರೆ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಓಂಕಾರಪ್ಪ ಲಂಚದ ಹಣ ಸ್ವೀಕರಿಸುವಾಗ ಎಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಕರ್ತಿಕೆರೆ ಗ್ರಾಮದ ಕೆ.ಟಿ.ದಶರಥರಾಜ್ ಅರಸ್ ಬಿನ್ ಗಿರಿಜೇ ತಿರುಮಲ ಅರಸ್ ಎಂಬವರು ಕರ್ತಿಕೆರೆ ಗ್ರಾಮದಲ್ಲಿ ಅನಧಿಕೃತವಾಗಿ ಕಟ್ಟಿಕೊಂಡು ವಾಸವಾಗಿರುವ ಮನೆಯನ್ನು ಕಲಂ 94 (ಸಿ) ಆಕ್ರಮ ಸಕ್ರಮ ಕಾರ್ಯಕ್ರಮದಡಿ ಮಂಜೂರು ಮಾಡಿಕೊಡುವಂತೆ 2015 ರಲ್ಲಿ  ಚಿಕ್ಕಮಗಳೂರು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಗ್ರಾಮ ಲೆಕ್ಕಾಧಿಕಾರಿ ಓಂಕಾರಪ್ಪ ಮನೆಯನ್ನು 94 (ಸಿ) ಅಡಿ ಮಂಜೂರು ಮಾಡಿಕೊಡಲು 15000/- ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ಕೆ.ಟಿ.ದಶರಥರಾಜ್ ಅರಸ್ ಅವರು ಡಿಸೆಂಬರ್ 26 ರಂದು ಎಸಿಬಿ ಚಿಕ್ಕಮಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇಂದು ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ಆಪಾದಿತ ಗ್ರಾಮ ಲೆಕ್ಕಾಧಿಕಾರಿ ಓಂಕಾರಪ್ಪ ಅವರು ಕೆ.ಟಿ.ದಶರಥರಾಜ್ ಅರಸ್ ಅವರಿಂದ ಲಂಚದ ಹಣ ರೂ.15000 ಸ್ವೀಕರಿಸುತ್ತಿದ್ದಾಗ ಎಸಿಬಿ ಠಾಣೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿ ಮತ್ತು ಹಣವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಂಗಳೂರಿನ ಪಶ್ಚಿಮ ವಲಯದ ಎಸಿಬಿ ಪೊಲೀಸ್ ಅಧೀಕ್ಷಕ ಶೃತಿ ಎನ್.ಎಸ್. ಅವರ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ ನಾಗೇಶ್‍ ಶೆಟ್ಟಿ, ಪೊಲೀಸ್ ನಿರೀಕ್ಷಕರಾದ ಕೆ.ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ದಾಳಿ ನಡೆಸಿರುತ್ತಾರೆ ಎಂದು ಚಿಕ್ಕಮಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಉಪಾಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News