ಚಿಕ್ಕಮಗಳೂರು: ಡಿ.29, 30ರಂದು ಸಾವಯವ ಸಿರಿಧಾನ್ಯ ಮೇಳ

Update: 2018-12-27 17:12 GMT

ಚಿಕ್ಕಮಗಳೂರು, ಡಿ.27: ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದು, ಸಾವಯವ ಮಾರುಕಟ್ಟೆ ವಿಸ್ತರಣೆ ಮಾಡುವುದು ಸೇರಿದಂತೆ ಹಾಗೂ ಸಾವಯವ ಕೃಷಿಕರು, ಉದ್ದಿಮೆದಾರರು ಮತ್ತು ಗ್ರಾಹಕರೊಂದಿಗೆ ಸಂಪರ್ಕ ಏರ್ಪಡಿಸುವುದೇ ಸಾವಯವ ಸಿರಿಧಾನ್ಯ ಕೃಷಿ ಮೇಳದ ಉದ್ದೇಶವಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಂ.ಸೋಮಸುಂದರ್ ತಿಳಿಸಿದ್ದಾರೆ.

ಗುರುವಾರ ಜಿಲ್ಲಾ ಕೃಷಿ ಇಲಾಖಾ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕೃಷಿ ಇಲಾಖೆ ವತಿಯಿಂದ ಡಿ.29 ಮತ್ತು 30ರಂದು ನಗರದ ಐಡಿಎಸ್‍ಜ ಕಾಲೇಜು ಮೈದಾನದಲ್ಲಿ ಸಾವಯವ ಸಿರಿಧಾನ್ಯ ಮೇಳ ನಡೆಯಲಿದ್ದು, ಮೇಳದ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ ಎಂದರು.

ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಲಿದ್ದು, ಮೇಳದ ಅಂಗವಾಗಿ ನಡೆಯುವ ವಸ್ತು ಪ್ರದರ್ಶನವನ್ನು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಟಿ.ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಧಾನಪರಿಷತ್ ಉಪ ಸಭಾಪತಿ ಧರ್ಮೇಗೌಡ ಹಸ್ತಪ್ರತಿಗಳ ಬಿಡುಗಡೆ ಮಾಡಲಿದ್ದಾರೆ. ಜಿಲ್ಲೆಯ ಐದೂ ಕ್ಷೇತ್ರಗಳ ಶಾಸಕರು, ಸಂಸದರು, ಜಿಲ್ಲಾ ಪಂಚಾಯತ್, ತಾಪಂ ಅಧ್ಯಕ್ಷರು ಹಾಗೂ ಇತರ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೇಳದ ಅಂಗವಾಗಿ ಎರಡು ದಿನಗಳ ಕಾಲ ಸಾವಯವ ಕೃಷಿ ಸಂಬಂಧ ವಿವಿಧ ಗೋಷ್ಠಿಗಳು, ಸಾವಯವ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮ, ಸಾವಯವ ಮಳಿಗೆಗಳು ಮೇಳದ ಆಕರ್ಷಣೆಯಾಗಿದ್ದು, ಜಿಲ್ಲಾದ್ಯಂತ ಸುಮಾರು 3 ಸಾವಿರ ಕೃಷಿಕರು ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಾವಯವ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿರುವುದರಿಂದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನುಂಟು ಮಾಡುತ್ತವೆ. ಸಿರಿಧಾನ್ಯಗಳಲ್ಲಿ ನಾರಿನಾಂಶ ಹೆಚ್ಚಿದ್ದು, ಮಾನವನ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಲಭ್ಯವಾಗುತ್ತವೆ. ಅತ್ಯಂತ ಕಡಿಮೆ ನೀರನ್ನು ಬಳಸಿ ಸಿರಿಧಾನ್ಯಗಳಾದ ಹಾರಕ, ನವಣೆ, ಸಜ್ಜೆ, ಬರಗು, ಕೊರಲೆ, ಸಾಮೆ, ಊದಲು ಮತ್ತಿತರ ಬೆಳೆಗಳನ್ನು ಬೆಳೆಯಲು ಸಾಧ್ಯವಿದೆ. ಈ ಬಗ್ಗೆ ಸಾವಯವ ಮೇಳದಲ್ಲಿ ಜಾಗೃತಿ ಮೂಡಿಸಲಾಗುವುದು. ಮೇಳದಲ್ಲಿ ಸಾವಯವ ಕೃಷಿಕರು, ಮಾರಾಟಗಾರರು ವಿವಿಧ ಮಳಿಗೆಗಳ ಮೂಲಕ ಭಾಗವಹಿಸಲಿದ್ದು, ಗ್ರಾಹಕರಿಗೆ ಕೊಳ್ಳಲು ಅವಕಾಶ ಒದಗಿಸಲಾಗಿದೆ. ಸರಕಾರದಿಂದ ಸಾವಯವ ಕೃಷಿಗೆ ದೊರೆಯುವ ಸೌಲಭ್ಯ, ಸಬ್ಸಿಡಿಗಳ ಮಾಹಿತಿ ನೀಡಲಾಗುವುದು ಎಂದ ಅವರು, ಸಿರಿಧಾನ್ಯಗಳ ಬಳಸಿ ವಿಶೇಷ ಖಾದ್ಯ ತಯಾರಿ ತರಬೇತಿ ಹಾಗೂ ಸ್ಪರ್ಧೆಗಳೊಂದಿಗೆ ಶಾಲಾ ಮಕ್ಕಳಿಗೆ ಸಿರಿಧಾನ್ಯಗಳ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಎರಡು ದಿನಗಳ ಕಾಲ ನಡೆಯುವ ಮೇಳದಲ್ಲಿ ಸಿರಿಧಾನ್ಯಗಳ ಮಹತ್ವಗಳು, ಸವಾಲುಗಳು, ದೇಶೀ ತಳಿಗಳ ಸಂರಕ್ಷಣೆ, ಸಿರಿಧಾನ್ಯಗಳ ಉತ್ಪಾದನೆಯಲ್ಲಿ ತಾಂತ್ರಿಕತೆ ಮೊದಲಾದ ವಿಚಾರಗಳ ಬಗ್ಗೆ ವಿವಿಧ ಗೋಷ್ಠಿ ನಡೆಯಲಿದ್ದು, ವಿವಿಧ ಗೋಷ್ಠಿಯಲ್ಲಿ ಬೆಂಗಳೂರು ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ.ನಾರಾಯಣ ಗೌಡ, ಏಮ್ಸ್ ಪ್ರಾಧ್ಯಾಪಕ ಡಾ.ವಸಂತ್‍ ಕುಮಾರ್, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ಡಾ.ನಾರಾಯಣ್ ಎಸ್.ಮಾವರ್‍ಕರ್, ಮೈಸೂರು ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರೊ.ಗೋವಿಂದರಾಜು, ಶಿವಮೊಗ್ಗದ ಡಾ.ಉಲ್ಲಸ್ ಸೇರಿದಂತೆ ಸಾವಯವ ಕೃಷಿಕರಾದ ಅರವಿಂದ್ ಭೂತನಕಾಡು, ಚಂದ್ರಶೇಖರ್ ನಾರಾಯಣಪುರ, ಈಶ್ವರಪ್ಪ, ವೀರಣ್ಣ ಮತ್ತಿತರರು ವಿಚಾರ ಮಂಡಿಸಲಿದ್ದಾರೆಂದರು.

ಸುದ್ದಿಗೋಷ್ಠಿಯಲ್ಲಿ ತರೀಕೆರೆ ಕೃಷಿ ಇಲಾಖೆ ವಿಭಾಗದ ಉಪ ನಿರ್ದೇಶಕ ಕೃಷ್ಣಮೂರ್ತಿ, ಚಿಕ್ಕಮಗಳೂರು ವಿಭಾಗದ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News