×
Ad

ಗ್ರಾಮೀಣ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿ: 50 ಕೋಟಿ ರೂ. ಬಿಡುಗಡೆಗೆ ಕೊಡಗು ಜಿ.ಪಂ ಮನವಿ

Update: 2018-12-28 17:18 IST

ಮಡಿಕೇರಿ, ಡಿ.28: ಕೊಡಗು ಜಿಲ್ಲೆಯಲ್ಲಿ ಮಹಾಮಳೆಯಿಂದ ಉಂಟಾದ ಪ್ರವಾಹಕ್ಕೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವ್ಯಾಪ್ತಿಯಲ್ಲಿ 2486.83 ಕಿ.ಮೀ. ರಸ್ತೆಗೆ 321 ಕೋಟಿ ರೂ., 125 ಸೇತುವೆಗಳಿಗೆ ರೂ.19.27 ಕೋಟಿ, 160 ಕಟ್ಟಡಗಳಿಗೆ ರೂ.8.65 ಕೋಟಿ ಮತ್ತು 218 ತಡೆಗೋಡೆಗಳಿಗೆ ರೂ.168.94 ಕೋಟಿ ಹೀಗೆ ಸುಮಾರು 517.86 ಕೋಟಿ ರೂ.ಗಳ ನಷ್ಟವನ್ನು ಅಂದಾಜಿಸಲಾಗಿದೆ. ಆದರೆ ಈವರೆಗೆ ಪಂಚಾಯತ್ ರಾಜ್ ಇಲಾಖೆಗೆ ರೂ.33.15 ಕೋಟಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ದುರಸ್ತಿ ಕಾರ್ಯಕ್ಕೆ ತಕ್ಷಣಕ್ಕೆ 50 ಕೋಟಿ ರೂ. ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರಿಗೆ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಮನವಿ ಮಾಡಿದ್ದಾರೆ.    

ಎನ್‍ಆರ್‍ಡಿಡಬ್ಲ್ಯುಪಿ ಯಡಿ ಕಳೆದ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈ ಸಂಬಂಧ 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲು ಕೋರಲಾಗಿತ್ತು. ಆದರೆ ಈ ಸಾಲಿನಲ್ಲಿ ಕೇವಲ ರೂ.9.74 ಕೋಟಿ ಅನುದಾನ ನಿಗದಿಯಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಸಾಧ್ಯವಾಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೊಳವೆ ಬಾವಿ, ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಜ್ಯಾಕ್‍ವೆಲ್ ನಿರ್ಮಾಣ, ಪೈಪ್‍ಲೈನ್ ಅಳವಡಿಕೆ ಮುಂತಾದವುಗಳು ಅತೀ ಅವಶ್ಯಕತೆಯಿದ್ದು, ಈ ವರ್ಷ ಪ್ರವಾಹ ಪೀಡಿತ ಜಿಲ್ಲೆಯಾಗಿ ಬೆಟ್ಟಗಳು ಕುಸಿದಿರುವುದರಿಂದ ಜಲ ಪ್ರಳಯ ಉಂಟಾಗಿ ನೈಸರ್ಗಿಕ ನೀರಿನ ಮೂಲಗಳು ಇಲ್ಲವಾಗಿದೆ. ಅಂತರ್ಜಲ ಬತ್ತಿ ಹೋಗುತ್ತಿರುವುದರಿಂದ ಈ ಸಮಸ್ಯೆ ಪರಿಹಾರಕ್ಕೆ ರೂ.50 ಕೋಟಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News