ರಸ್ತೆ ಅಪಘಾತ: ಮಾಜಿ ಶಾಸಕ ದತ್ತು ಹಕ್ಯಾಗೋಳ ಮೃತ್ಯು
ಬೆಂಗಳೂರು, ಡಿ.28: ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ನಲ್ಲಿ ಶುಕ್ರವಾರ ಮಧ್ಯಾಹ್ನ ಲಾರಿ ಮತ್ತು ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬಿಜೆಪಿಯ ಮಾಜಿ ಶಾಸಕ ದತ್ತು ಹಕ್ಯಾಗೋಳ (70) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಿಟ್ನಿಯ ಮಸೂಬಾ ದೇವಸ್ಥಾನಕ್ಕೆ ದ್ವಿಚಕ್ರ ವಾಹನದಲ್ಲಿ ಮಾಜಿ ಶಾಸಕ ದತ್ತು ಮತ್ತು ಸುರೇಶ್ ಗಡೆಕರ್ ಪುಣೆ –ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲ್ಲಿ ಹೋಗುತ್ತಿದ್ದಾಗ ಹಿಟ್ನಳ್ಳಿ ಕ್ರಾಸ್ ನಲ್ಲಿ ಅಪಘಾತ ಸಂಭವಿಸಿತು. ಅಪಘಾತದಿಂದ ಗಂಭೀರ ಗಾಯಗೊಂಡ ಮಾಜಿ ಶಾಸಕ ದತ್ತು ಸ್ಥಳದಲ್ಲೇ ಮೃತಪಟ್ಟರು. ಅವರೊಂದಿಗಿದ್ದ ಸಹ ಸವಾರ ಸುರೇಶ್ ಗಡೇಕರ್(50) ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಮೃತಪಟ್ಟಿದ್ದಾರೆ.
ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವ ಹೋರಾಟದಲ್ಲಿ ಸಕ್ರೀಯರಾಗಿರುವ ಸರಳ ವ್ಯಕ್ತಿ 2004ರಲ್ಲಿ ಚಿಕ್ಕೋಡಿ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ದತ್ತು ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.