ನನ್ನ ಮಗನ ಮೇಲೆ ಆಣೆ, ರೈತರ ಸಾಲ ಮನ್ನಾ ಮಾಡುತ್ತೇನೆ: ಸಿಎಂ ಕುಮಾರಸ್ವಾಮಿ

Update: 2018-12-28 13:57 GMT

ಬಾಗಲಕೋಟೆ, ಡಿ.28: ರೈತರ ಸಾಲಮನ್ನಾ ವಿಚಾರದಲ್ಲಿ ಸಮ್ಮಿಶ್ರ ಸರಕಾರ ಬದ್ಧವಾಗಿದೆ. ನನ್ನ ಮೇಲೆ ವಿಶ್ವಾಸವಿಡಿ. ನನಗೆ ಇರುವುದು ಒಬ್ಬನೇ ಮಗ. ಅವನ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ, ಸಾಲಮನ್ನಾ ಮಾಡೇ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಬಾಗಲಕೋಟೆಯಲ್ಲಿ 2796 ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಮ್ಮಿಶ್ರ ಸರಕಾರ ಸಾಲಮನ್ನಾ ವಿಚಾರದಲ್ಲಿ ರೈತರಿಗೆ ಟೋಪಿ ಹಾಕುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ನಾವು ಸಾಲಮನ್ನಾ ಮಾಡುವ ದಿಟ್ಟ ನಿರ್ಧಾರ ಮಾಡಿದ್ದೇವೆ ಎಂದರು.

ನಮ್ಮ ಸರಕಾರ ರೈತರಿಗೆ ಮೋಸ ಮಾಡುವುದಿಲ್ಲ. ನಮಗೆ ಶಕ್ತಿ ಕೊಡಿ, ಮೈತ್ರಿ ಸರಕಾರ ಉಳಿಯುತ್ತೆ, ರೈತರು ಹೆದರಬೇಕಾದ ಅಗತ್ಯವಿಲ್ಲ. ನಿಮ್ಮ ಸಾಲಮನ್ನಾ ಮಾಡದೇ ನಾನು ನಿರ್ಗಮಿಸುವುದಿಲ್ಲ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಸಾಲಮನ್ನಾಗೆ ಬೇರೆ ಯಾವುದೇ ಶರತ್ತುಗಳನ್ನು ಹಾಕಿಲ್ಲ. ಆಧಾರ್‌ ಕಾರ್ಡ್, ಪಹಣಿ ಮಾಹಿತಿ ಕೇಳಲಾಗಿತ್ತು. ಸಾಲಮನ್ನಾದ ಮೊತ್ತ ಮಧ್ಯವರ್ತಿಗಳ ಪಾಲಾಗಬಾರದೆಂದು ಈ ನಿಯಮ ಮಾಡಿದ್ದೆವು ಎಂದು ಅವರು ಹೇಳಿದರು. ಸಾಲ ಕಟ್ಟುವಂತೆ ಬ್ಯಾಂಕ್‌ನವರು ನೋಟಿಸ್ ನೀಡಿದರೆ ಗಾಬರಿಯಾಗಬೇಡಿ ಎಂದು ರೈತರಿಗೆ ಧೈರ್ಯ ತುಂಬಿದ ಕುಮಾರಸ್ವಾಮಿ, ಅವರಿಗೆ(ಬ್ಯಾಂಕ್‌ನವರು) ನಿಮ್ಮನ್ನು ಏನೂ ಮಾಡಲು ಆಗುವುದಿಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ. ಸಮಸ್ಯೆ ಹೆಚ್ಚಾದರೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಎಂದು ಸೂಚಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಮನ್ನಾಗೂ ಋಣಮುಕ್ತ ಪ್ರಮಾಣ ಪತ್ರ ಕೊಟ್ಟಿದ್ದೇವೆ. ಸಾಲಮನ್ನಾ ಯೋಜನೆಗೆ ಹಣದ ಕೊರತೆಯಿಲ್ಲ. ಎರಡೂವರೆ ಸಾವಿರ ಕೋಟಿ ರೂ.ಹೆಚ್ಚುವರಿ ಹಣ ಕೊಡಲು ಪೂರಕ ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರಿಗೂ 25 ಸಾವಿರ ಇನ್ಸೆಂಟಿವ್ ಕೊಡಲು ನಿರ್ಧಾರ ಮಾಡಲಾಗಿದೆ. ನಾಲ್ಕು ಹಂತದಲ್ಲಿ ಸಾಲಮನ್ನಾ ಮಾಡಲಾಗುತ್ತದೆ. ಮುಂದಿನ ಬಜೆಟ್‌ನಲ್ಲಿ 25 ಸಾವಿರ ಕೋಟಿ ರೂ.ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಘೋಷಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಸಾಲ ಮನ್ನಾ ಯೋಜನೆಯಡಿ ಉತ್ತರ ಕರ್ನಾಟಕದ 12 ಜಿಲ್ಲೆಗಳ 29,190 ಕೋಟಿ ಮನ್ನಾ ಆಗುತ್ತಿದೆ. ಅದೇ ಹಳೆಯ ಕರ್ನಾಟಕ ಭಾಗದ 12 ಜಿಲ್ಲೆಗಳ ವ್ಯಾಪ್ತಿಯಲ್ಲಿ 12,070 ಕೋಟಿ ರೂ., ಮಧ್ಯ ಕರ್ನಾಟಕದ ಮೂರು ಜಿಲ್ಲೆಗಳ 3981 ಕೋಟಿ ರೂ.ಹಾಗೂ ಕರಾವಳಿ ಜಿಲ್ಲೆಗಳಲ್ಲಿ 1508 ಕೋಟಿ ರೂ.ಮನ್ನಾ ಆಗಲಿದೆ. ಇದರ ಲಾಭವನ್ನು ಶೇ.63ರಷ್ಟು ಉತ್ತರ ಕರ್ನಾಟಕದ ರೈತ ಕುಟುಂಬಗಳು ಪಡೆಯುತ್ತಿವೆ. ಹಾಗಿದ್ದ ಮೇಲೆ ನಾನು ಈ ಭಾಗದ ವಿರೋಧಿ ಹೇಗಾಗುತ್ತೇನೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನಿನ್ನೆಯಷ್ಟೇ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, ನಮ್ಮೊಂದಿಗೆ ಕೈ ಜೋಡಿಸುವಂತೆ ಮನವಿ ಮಾಡಿದ್ದೇನೆ. ದೇವೇಗೌಡರು ತಮ್ಮ ಅಧಿಕಾರಾವಧಿಯಲ್ಲಿ ನೀರಾವರಿ ಯೋಜನೆ ಜಾರಿ ಮಾಡಿದ್ದರು. ಬಾದಾಮಿ ಕ್ಷೇತ್ರದ 18 ಹಳ್ಳಿಗಳಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ 65 ಸಾವಿರ ಕೋಟಿ ರೂ.ಭೂ ಸ್ವಾಧೀನಕ್ಕೆ ಕೊಡಬೇಕು. ಮೊದಲು ಆಂಧ್ರಪ್ರದೇಶಕ್ಕೆ ನೀರು ಕೊಡಬೇಕು. ನಮ್ಮ ರೈತರ ಭೂಮಿಯಲ್ಲಿ ನೀರು ನಿಲ್ಲಿಸಿ, ಆಂಧ್ರಪ್ರದೇಶಕ್ಕೆ ನೀರು ಕೊಡಬೇಕು. ಇದು ನೀರಿನ ಹಂಚಿಕೆ ಪರಿಸ್ಥಿತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಫೆಬ್ರವರಿಯಲ್ಲಿ ಬಜೆಟ್ ಮಂಡನೆ

ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಮಾಡಲಾಗುವುದು. ರೈತರ ಶಾಶ್ವತ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡುತ್ತೇನೆ. ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದ್ದು, ನೀವು ನಮಗೆ ಸಹಕಾರ ಕೊಡಿ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಹೆಚ್ಚು ಸಮಯ ವಿನಿಯೋಗಿಸಲು ನಿರ್ಧರಿಸಿದ್ದೇನೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News