×
Ad

ಪರಮೇಶ್ವರ್ ಖಾತೆ ಬದಲಾಯಿಸಿದ್ದು ಹೈಕಮಾಂಡ್: ಸಿದ್ದರಾಮಯ್ಯ

Update: 2018-12-28 19:32 IST

ಹುಬ್ಬಳ್ಳಿ, ಡಿ.28: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಳಿಯಿದ್ದ ಗೃಹ ಖಾತೆಯನ್ನು ಎಂ.ಬಿ.ಪಾಟೀಲ್‌ಗೆ ವಹಿಸುವ ತೀರ್ಮಾನ ಕೈಗೊಂಡಿರುವುದು ಪಕ್ಷದ ಹೈಕಮಾಂಡ್. ಈ ವಿಚಾರದಲ್ಲಿ ನಾವೇನು ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಖಾತೆ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ನನ್ನ ಹಾಗೂ ಪರಮೇಶ್ವರ್ ನಡುವೆ ಮಾತಿನ ಚಕಮಕಿ ನಡೆದಿದೆ ಅನ್ನೋದೆಲ್ಲ ಆಧಾರ ರಹಿತವಾದ ಸುದ್ದಿ. ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಿ ಎಂದು ಹೈಕಮಾಂಡ್ ಬಳಿ ಒತ್ತಾಯ ಮಾಡಿದ್ದೇ ನಾನು ಎಂದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲೆ ಇದ್ದಾರೆ. ಅವರು ಕಾಂಗ್ರೆಸ್ ಪಕ್ಷ ಬಿಡುತ್ತಾರೆ ಅನ್ನೋದೆಲ್ಲ ಊಹಾಪೋಹ. ಅವರು ಮುಂಬೈಗೆ ಹೋಗಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತಾರೆ ಎಂಬುದೆಲ್ಲ ಸುಳ್ಳು. ಸಂಪುಟದಿಂದ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಸ್ವಲ್ಪ ಬೇಸರವಾಗಿರಬಹುದು ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.

ಸಂಪುಟ ವಿಸ್ತರಣೆ ವಿಚಾರದಲ್ಲಿ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ನನ್ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವುದೇಕೆ ಅನ್ನೋದು ಗೊತ್ತಾಗುತ್ತಿಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ನಾವು ನಡೆದುಕೊಂಡಿದ್ದೇವೆ. ಹೊರಟ್ಟಿ ನನ್ನನ್ನು ಪ್ರಶ್ನಿಸುವುದನ್ನು ಬಿಟ್ಟು ಕುಮಾರಸ್ವಾಮಿಯನ್ನು ಪ್ರಶ್ನಿಸಲಿ ಎಂದು ಅವರು ತಿರುಗೇಟು ನೀಡಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ದಲಿತ ಅನ್ನೋ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ತುಳಿಯಲಾಗುತ್ತಿದೆ ಎಂದು ಸಚಿವ ಎಚ್.ಡಿ.ರೇವಣ್ಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಚ್.ಡಿ.ರೇವಣ್ಣ ಹಾಗೆ ಹೇಳಿದ್ದಾನೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ರೇವಣ್ಣ ನನ್ನನ್ನು ನೇರವಾಗಿ ಈ ಬಗ್ಗೆ ಪ್ರಶ್ನಿಸಿದರೆ ನಾನು ಆತನಿಗೆ ಉತ್ತರ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News