ಖಾತೆ ಹಂಚಿಕೆಯಲ್ಲಿ ಅನ್ಯಾಯವಾಗಿಲ್ಲ: ಸತೀಶ್ ಜಾರಕಿಹೊಳಿ
Update: 2018-12-28 20:17 IST
ಬೆಳಗಾವಿ, ಡಿ.28: ಅರಣ್ಯ ಇಲಾಖೆಯು ದೊಡ್ಡ ಖಾತೆಯಾಗಿದೆ. ಖಾತೆ ಹಂಚಿಕೆ ವೇಳೆ ನನಗೆ ಅನ್ಯಾಯವಾಗಿರುವ ಪ್ರಶ್ನೆಯೇ ಇಲ್ಲ ಎಂದು ನೂತನ ಅರಣ್ಯ ಮತ್ತು ಪರಿಸರ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಖಾತೆ ಇದು. ನನಗೆ ಈ ಖಾತೆ ಬಗ್ಗೆ ತೃಪ್ತಿಯಿದೆ ಎಂದರು.
ನನ್ನ ಹಾಗೂ ಹೈಕಮಾಂಡ್ ಸಂಪರ್ಕಕ್ಕೆ ರಮೇಶ್ ಜಾರಕಿಹೊಳಿ ಸಿಕ್ಕಿಲ್ಲ. ನಾವು ಅವರನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಅವರು ನಮ್ಮ ಸಂಪರ್ಕಕ್ಕೆ ಸಿಕ್ಕ ಕೂಡಲೆ ನಾನು ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ಅವರು ಹೇಳಿದರು.
ರಮೇಶ್ ಜಾರಕಿಹೊಳಿ ಹಠವಾದಿ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗೂಡುವ ಅವಶ್ಯಕತೆಯಿದೆ. ನಮ್ಮ ನಡುವೆ ಸೃಷ್ಟಿಯಾಗಿರುವ ಸಮಸ್ಯೆ ಆದಷ್ಟು ಶೀಘ್ರದಲ್ಲೆ ಇತ್ಯರ್ಥ ಆಗಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.