ಸಕಲೇಶಪುರ: ಹಣಕ್ಕಾಗಿ ತಾಯಿಯ ಕೈಯನ್ನೇ ಕತ್ತರಿಸಿದ ಮಗ
ಸಕಲೇಶಪುರ,ಡಿ.28: ಹಣಕ್ಕಾಗಿ ತಾಯಿಯ ಬಲಗೈಯನ್ನು ಕತ್ತರಿಸಿದ ಘಟನೆ ತಾಲೂಕಿನ ಎಡವರಹಳ್ಳಿ ಬಳಿ ಸಂಜೆ ಏಳು ಗಂಟೆಯ ಸಮಯದಲ್ಲಿ ನಡೆದಿದೆ.
ಲಲಿತಮ್ಮ (60) ಗಾಯಗೊಂಡಿರುವ ಮಹಿಳೆಯಾಗಿದ್ದು, ಈಕೆಯ ಮಗ ದಿಲೀಪ (40) ಭೀಕರವಾಗಿ ತನ್ನ ಹೆತ್ತ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಸಂಜೆ ವೇಳೆ ಪಾನಮತ್ತನಾಗಿ ಮನೆಗೆ ಬಂದ ದಿಲೀಪ ತಾಯಿಯ ಬಳಿ ಹಣಕ್ಕಾಗಿ ಪೀಡಿಸಿದ್ದಾನೆ. ಹಣ ನೀಡಲು ನಿರಾಕರಿಸಿದ ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಬಲಗೈಯನ್ನು ಕತ್ತರಿಸಿದ್ದಾನೆ. ಅಲ್ಲದೇ, ಎಡಗೈನ ಬೆರಳುಗಳು ತುಂಡಾಗಿದ್ದು, ಕುತ್ತಿಗೆ, ಹಣೆ, ಬೆನ್ನಿನ ಮೇಲೆ ಗಂಭೀರವಾದ ಗಾಯಗಳಾಗಿವೆ.
ಪಟ್ಟಣದ ಕಾಫರ್ಡ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಯಸಳೂರು ಪೊಲೀಸರು ಆರೋಪಿ ದಿಲೀಪನನ್ನು ಬಂಧಿಸಿ ವಿಚಾರಣೆಗೆ ಒಪ್ಪಿಸಿದ್ದಾರೆ.
ದಿಲೀಪ ಈ ಹಿಂದೆಯೂ ಸಹ ತಾಯಿಯ ಮೇಲೆ ಹಲ್ಲೆ ನಡೆಸಿದ್ದನು ಎನ್ನಲಾಗಿದೆ. ತನ್ನ ಪಾಲಿನ ಐದು ಎಕರೆ ತೋಟವನ್ನು ದಿಲೀಪನು ಈ ಹಿಂದೆಯೇ ಮಾರಿಕೊಂಡಿದ್ದ. ತನ್ನ ತಾಯಿಯ ಹೆಸರಿನಲ್ಲಿದ್ದ ಐದು ಎಕರೆ ತೋಟವನ್ನು ಬರೆದುಕೊಡುವಂತೆ ದಿನಾಲೂ ಪೀಡಿಸುತ್ತಿದ್ದ ಎನ್ನಲಾಗಿದೆ.